ವಕ್ಫ್ ಸಲಹಾ ಸಮಿತಿಯಂತಹ ಜವಾಬ್ದಾರಿಯುತ ಹುದ್ದೆಗಳಿಗೆ ಕೇವಲ ಪಕ್ಷದ ಸಕ್ರಿಯ ಕಾರ್ಯಕರ್ತರನ್ನು ನೇಮಿಸಬೇಕು ಎಂಬ ಅಭಿಪ್ರಾಯಗಳು ಇತ್ತೀಚೆಗೆ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಕಳಕಳಿಯಿಂದ ಕೆಲವು ವಿಚಾರಗಳನ್ನು ಮುಂದಿಡುವುದು ಅಗತ್ಯವಾಗಿದೆ.
ಕಾಂಗ್ರೆಸ್ ಎಂದರೆ ಕೇವಲ ಅಧಿಕೃತ ಕಾರ್ಯಕರ್ತರ ಸಮೂಹವಲ್ಲ. ಕಾಂಗ್ರೆಸ್‌ಗೆ ಮತ ನೀಡುವವರು, ಬೆಂಬಲಿಸುವವರು, ಪಕ್ಷದ ಪರವಾಗಿ ಧ್ವನಿ ಎತ್ತುವವರು, ಧನಸಹಾಯ ಮಾಡುವವರು ಹಾಗೂ ಪಕ್ಷದ ಸಿದ್ಧಾಂತಗಳನ್ನು ಗೌರವಿಸುವವರೂ ಅದರ ವಿಶಾಲ ಬೆಂಬಲ ಬಳಗದ ಭಾಗವೇ ಆಗಿದ್ದಾರೆ.
ಆದರೆ ವಕ್ಫ್ ಸಲಹಾ ಸಮಿತಿಯ ಜವಾಬ್ದಾರಿ ಸಾಮಾನ್ಯ ರಾಜಕೀಯ ಹುದ್ದೆಯಲ್ಲ. ವಕ್ಫ್ ಎನ್ನುವುದು ಧಾರ್ಮಿಕ ಹಾಗೂ ಸಾಮಾಜಿಕ ಅಮಾನತ್ತಿಗೆ ಸಂಬಂಧಿಸಿದ ಕ್ಷೇತ್ರ. ಹೀಗಾಗಿ ಇಲ್ಲಿ ರಾಜಕೀಯ ನಂಟಿಗಿಂತ ವಕ್ಫ್ ಕ್ಷೇತ್ರದ ಜ್ಞಾನ, ಅನುಭವ, ದೀನ್ ಮತ್ತು ಸಮುದಾಯದ ಅರಿವು, ಸಾರ್ವಜನಿಕ ವಿಶ್ವಾಸ ಹಾಗೂ ಸೇವಾ ಮನೋಭಾವ ಮುಖ್ಯ ಮಾನದಂಡಗಳಾಗಬೇಕು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ವಿವಿಧ ನಿಗಮ, ಮಂಡಳಿ ಮತ್ತು ಇತರ ಸರ್ಕಾರಿ ಜವಾಬ್ದಾರಿಗಳಲ್ಲಿ ಅವಕಾಶ ಕಲ್ಪಿಸಲು ಸಾಕಷ್ಟು ಅವಕಾಶಗಳಿವೆ. ಆದರೆ ವಕ್ಫ್‌ನಂತಹ ಅಮಾನತ್ತಿನ ಜವಾಬ್ದಾರಿಯಲ್ಲಿ ಅರ್ಹತೆ ಮತ್ತು ಅನುಭವಕ್ಕೆ ಆದ್ಯತೆ ನೀಡುವುದು ಕಾಲದ ಅಗತ್ಯ.
ದಕ್ಷಿಣ ಕನ್ನಡದಲ್ಲಿ ಈ ಹಿಂದೆ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಮಹಮ್ಮದ್ ಕಮಾಲ್, ಮಹಮ್ಮದ್ ಕುಂಞಿ, ಯೆನೆಪೋಯಾ ಅಬ್ದುಲ್ಲ ಕುಂಞಿ, ಎಚ್.ಎಸ್. ಉಸ್ಮಾನ್ ಹಾಜಿ, ಎಸ್.ಎಂ. ರಶೀದ್ ಹಾಜಿ, ಕಣಚೂರು ಮೋನು ಹಾಜಿ ಹಾಗೂ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರಂತಹವರ ಹಿನ್ನೆಲೆಯನ್ನು ಗಮನಿಸಿದಾಗ, ಈ ಜವಾಬ್ದಾರಿ ಕೇವಲ ಒಂದು ರಾಜಕೀಯ ಪಕ್ಷದ ಸಕ್ರಿಯ ಕಾರ್ಯಕರ್ತರಿಗೆ ಮೀಸಲಾದ ಹುದ್ದೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಕಾಂಗ್ರೆಸ್ ಸರ್ಕಾರವು ವಕ್ಫ್ ಸಲಹಾ ಸಮಿತಿಯ ನೇಮಕಾತಿಯನ್ನು ಕೇವಲ ರಾಜಕೀಯ ಲೆಕ್ಕಾಚಾರದಿಂದ ನೋಡದೆ, ವಕ್ಫ್ ಕ್ಷೇತ್ರದ ಅನುಭವ, ಜ್ಞಾನ, ಸಮುದಾಯದ ಕಾಳಜಿ ಮತ್ತು ಸಾರ್ವಜನಿಕ ವಿಶ್ವಾಸ ಹೊಂದಿರುವ ಸಮರ್ಥ ವ್ಯಕ್ತಿಗಳನ್ನು ಗುರುತಿಸಿ ಜವಾಬ್ದಾರಿ ನೀಡಲಿ.
ಈ ಮನವಿ ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಲ್ಲ. ಕರ್ನಾಟಕದ ಎಲ್ಲಾ ಜಿಲ್ಲೆಗಳ ವಕ್ಫ್ ಸಲಹಾ ಸಮಿತಿಗಳ ನೇಮಕಾತಿಯಲ್ಲೂ ಇದೇ ರೀತಿಯ ಅರ್ಹತೆ ಮತ್ತು ಅನುಭವಕ್ಕೆ ಆದ್ಯತೆ ನೀಡಬೇಕು.
ವಕ್ಫ್ ಒಂದು ಅಮಾನತ್ತು.
ಆ ಅಮಾನತ್ತಿನ ಜವಾಬ್ದಾರಿ ಯಾರಿಗೆ ನೀಡಬೇಕು ಎಂಬ ನಿರ್ಧಾರದಲ್ಲೂ ರಾಜಕೀಯಕ್ಕಿಂತ ಅರ್ಹತೆ, ಅನುಭವ ಮತ್ತು ಸಮುದಾಯದ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಲಿ.
ಸಾರ್ವಜನಿಕರ ಪರವಾಗಿ ವ್ಯಕ್ತವಾದ ಈ ಕಳಕಳಿಯ ಅಭಿಪ್ರಾಯವನ್ನು ದ.ಕ. ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಇಮ್ತಿಯಾಜ್ ಕೆದಂಬಾಡಿ ಮತ್ತು ಸಲಾಮ್ ಉಚ್ಚಿಲ್ ರವರು ಹೇಳಿದ್ದಾರೆ.
ಇನ್ನಷ್ಟು ವರದಿಗಳು
2020- 26,ಭಾರತದಲ್ಲಿ ಮುಸ್ಲಿಮ್ ಧಾರ್ಮಿಕ ಸ್ಥಳಗಳ ವಿರುದ್ಧ 2,100 ಕ್ಕೂ ಅಧಿಕ ಬುಲ್ಡೋಜರ್ ಕಾರ್ಯಾಚರಣೆ ಪ್ರಕರಣ: ವರದಿ.
ನಾವು ತೀವ್ರ ಸಂಧಿಗ್ಧತೆಯಲ್ಲಿದ್ದೇವೆ: ಪ.ಬಂ.ಮುಸ್ಲಿಂ ಕಾರ್ಮಿಕನನ್ನು “ಬಾಂಗ್ಲಾದೇಶಿ” ಎಂದು ಜೈಲಿನಲ್ಲಿ ಉಳಿಕೆ.ಕುಟುಂಬದ ವ್ಯಥೆ.
ಸಂವಿಧಾನ, ಷರಿಯಾ ಸಂರಕ್ಷಣೆಗಾಗಿ ಚಳುವಳಿ ಘೋಷಿಸಿದ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಸಂಘಟನೆ