ಮಂಗಳೂರು : ತಮ್ಮ ಮೇಲೆ ಮಾಹಿತಿ ಆಯೋಗ ದಂಡ ವಿಧಿಸಿದ ಪ್ರಕರಣವನ್ನು ರಾಜ್ಯ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದ ವಾರ್ತಾಧಿಕಾರಿ ರೋಹಿಣಿ ಕೆ ಅವರಿಗೆ ರಾಜ್ಯ ಹೈಕೋರ್ಟ್ ದಂಡ ವಿಧಿಸುವ ಮೂಲಕ ಮಹತ್ವದ ತೀರ್ಪು ನೀಡಿದೆ.
2013ರಲ್ಲಿ ರೋಹಿಣಿ ಕೆ ಅವರು ದ. ಕ. ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದಾಗ ಪತ್ರಕರ್ತ ಇಕ್ಬಾಲ್ ಕುತ್ತಾರ್ ಅವರು ಇಲಾಖೆಯು ಏರ್ಪಡಿಸಿದ್ದ ಜಿಲ್ಲಾ ವ್ಯಾಪ್ತಿಯ ಪ್ರೌಢಶಾಲಾ ಗಿರಿಜನ ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮದ ಖರ್ಚು ವೆಚ್ಚಗಳ ವಿವರ ಕೋರಿ ಮಾಹಿತಿ ಅರ್ಜಿ ಸಲ್ಲಿಸಿದ್ದರು. ಸದ್ರಿ ಅರ್ಜಿಗೆ ಮಾಹಿತಿ ನೀಡದೆ ನಿರಾಕರಿಸಿದ್ದ ವಾರ್ತಾಧಿಕಾರಿ ರೋಹಿಣಿ ವಿರುದ್ಧ ಇಕ್ಬಾಲ್ ಕುತ್ತಾರ್ ರಾಜ್ಯ ಮಾಹಿತಿ ಆಯೋಗದಲ್ಲಿ ದೂರು ಸಲ್ಲಿಸಿದಾಗ, ತನಿಖೆ ನಡೆಸಿದ ಆಯೋಗ ಮಾಹಿತಿ ನಿರಾಕರಿಸಿರುವುದು ಸರಿಯಲ್ಲವೆಂದು ರೋಹಿಣಿ ಅವರಿಗೆ ದಂಡ ವಿಧಿಸಿ ಆದೇಶ ನೀಡಿತ್ತು.
ಮಾಹಿತಿ ಆಯೋಗದ ಈ ಆದೇಶವನ್ನು ಸಂವಿಧಾನದ ಕಲಂ 226 ಮತ್ತು 227ರ ಪ್ರಕಾರ ರದ್ದುಪಡಿಸುವಂತೆ ರೋಹಿಣಿ ಅವರು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿ 2015ಕ್ಕೆ ರಿಟ್ ಅರ್ಜಿ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಾಜ್ಯ ಮಾಹಿತಿ ಆಯೋಗ ಹಾಗೂ ಇಕ್ಬಾಲ್ ಕುತ್ತಾರ್ ಅವರನ್ನು ಪ್ರತಿವಾದಿಗಳನ್ನಾಗಿಸಿದ್ದರು.
ಕಳೆದ ಎಂಟು ವರ್ಷಗಳಿಂದ ಫಿರ್ಯಾದುದಾರರು ಹಾಗೂ ಪ್ರತಿವಾದಿಗಳ ವಾದ ಪ್ರತಿವಾದಗಳನ್ನು ಆಲಿಸಿದ ರಾಜ್ಯ ಹೈಕೋರ್ಟ್ ಈ ಪ್ರಕರಣದಲ್ಲಿ ಇದೀಗ ಮಹತ್ವದ ಆದೇಶ ನೀಡಿದ್ದು, ಪ್ರಕರಣದಲ್ಲಿ ಫಿರ್ಯಾದುದಾರರ ಅರ್ಹತೆಯ ಕೊರತೆಯಿದ್ದು, ರಾಜ್ಯ ಮಾಹಿತಿ ಆಯೋಗದ ಆದೇಶ ರದ್ದುಪಡಿಸಲು ಯೋಗ್ಯವಲ್ಲವೆಂದು ಮನಗಂಡಿದೆ. ಅಲ್ಲದೆ ವಾರ್ತಾಧಿಕಾರಿ ರೋಹಿಣಿ ಅವರ ರಿಟ್ ಅರ್ಜಿಯನ್ನು ವಜಾಗೊಳಿಸಿ, ಪ್ರಕರಣದಲ್ಲಿ ಮಾಹಿತಿ ನಿರಾಕರಿಸಲ್ಪಟ್ಟು ಆಯೋಗಕ್ಕೆ ದೂರು ಸಲ್ಲಿಸಿ ದಂಡನೆ ವಿಧಿಸಲು ಕಾರಣರಾದ ಇಕ್ಬಾಲ್ ಕುತ್ತಾರ್ ಅವರಿಗೆ ರೋಹಿಣಿ ಅವರು ಒಂದು ತಿಂಗಳೊಳಗಾಗಿ 25 ಸಾವಿರ ರೂ. ಜುಲ್ಮಾನೆ ನೀಡುವಂತೆ ನ್ಯಾಯಮೂರ್ತಿ ಜ| ಆರ್. ನಟರಾಜ್ ತೀರ್ಪು ನೀಡಿರುವುದು ಹೈಕೋರ್ಟ್ ಆದೇಶದಲ್ಲಿ ಪ್ರಕಟವಾಗಿದೆ.
ಇನ್ನಷ್ಟು ವರದಿಗಳು
ಮಹಾಸಭಾ ನಿಯೋಗದಿಂದ ಅಲ್ಪ ಸಂಖ್ಯಾತ ಆಯೋಗ ಆಯುಕ್ತರ ಭೇಟಿ, ಪ್ರತಿ ತಾಲೂಕುಗಳಲ್ಲಿ ಬ್ಯಾರಿಭವನ ನಿರ್ಮಾಣಕ್ಕೆ ಕೋರಿಕೆ.
ರಾಜ್ಯ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸ್ಪೀಕರ್ ಯು.ಟಿ.ಖಾದರ್ ಮುಖ್ಯಮಂತ್ರಿಗೆ ಪತ್ರ.
ವಕ್ಫ್ ಮಂ.ಸಮಿತಿಯ ‘ಖಾಸಗಿ’ ಆಸ್ತಿ ಘೋಷಿಸುವ ನಿರ್ವಾಹಕರ ಆದೇಶ ಹಿಂಪಡೆಯುವಿಕೆ ಅಸಾಧ್ಯ: ಹೈಕೋರ್ಟ್