December 23, 2024

Vokkuta News

kannada news portal

ಬಿಎಸ್ಪಿ ಸಂಸದ ಡ್ಯಾನಿಶ್ ಆಲಿಯನ್ನು ಭಯೋತ್ಪಾದಕ ರೆಂದು ಕರೆ: ಎಸ್ಡಿಪಿಐ,ಅಬ್ದುಲ್ ಮಜೀದ್ ಖಂಡನೆ.

ಬೆಂಗಳೂರು: ದ್ವೇಷ ಭಾಷಣ ಬೀದಿಯಿಂದ ಸಂಸತ್ತು ತಲುಪಿದೆ. ಸಂಸದ ಡ್ಯಾನಿಶ್ ಅಲಿ ಅವರನ್ನು ಸದನದಲ್ಲಿ ಉಗ್ರವಾದಿ ಎಂದು ಕರೆದ ಬಿಜೆಪಿ ಸಂಸದ ಬಿಧೂರಿಯನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಮಜೀದ್ ರವರು ಹೇಳಿಕೆ ನೀಡಿದ್ದಾರೆ.

ಬೆಂಗಳೂರು, 22 ಸೆಪ್ಟೆಂಬರ್ 2023: ದ್ವೇಷ ಭಾಷಣಗಳ ಮೂಲಕ ಜನರಲ್ಲಿ ವಿಷವನ್ನು ಬಿತ್ತಿ ಆ ಮೂಲಕ ಮತ ಪಡೆಯುವ ಬಿಜೆಪಿಯ ಅಪಾಯಕಾರಿ ರಾಜಕಾರಣದಿಂದ ದೇಶ ಈಗಾಗಲೇ ನಲುಗುತ್ತಿದೆ. ಬಿಜೆಪಿ ಇಲ್ಲಿಯವರೆಗೆ ಬೀದಿಗಳಲ್ಲಿ ಹರಡುತ್ತಿದ್ದ ಕೋಮು ದ್ವೇಷದ ವಿಷವನ್ನು ಈಗ ಸಂಸತ್ ಭವನಕೆ ತಲುಪಿಸಿರುವುದು ದುರಂತ. ಬಿ.ಎಸ್.ಪಿ ಪಕ್ಷದ ಸಂಸದ ಡ್ಯಾನಿಶ್ ಅಲಿಯವರನ್ನು ಬಿಜೆಪಿ ಸಂಸದ ಬಿಧೂರಿ ಉಗ್ರವಾದಿಯೆಂದು ಸಂಸತ್ತಿನಲ್ಲೇ ಕರೆದಿರುವುದು ಅತ್ಯಂತ ಕ್ಷಮೆಗೆ ಅರ್ಹವಲ್ಲದ ಖಂಡನೀಯ ಕೃತ್ಯ.

ಈ ಕೂಡಲೇ ಬಿಧೂರಿಯನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.

ಸಂಸತ್ತಿಗೆ ಒಂದು ಘನತೆ ಇದೆ. ಅಲ್ಲಿ ತಾವು ಆರಿಸಿ ಕಳಿಸಿದ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ, ಏನು ಮಾತನಾಡುತ್ತಿದ್ದಾರೆ ಎಂಬುದನ್ನು ದೇಶದ ಜನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅಂತಹ ಪವಿತ್ರ ಮತ್ತು ಜವಾಬ್ದಾರಿಯುತ ಸ್ಥಾನದಿಂದ ಹೊರಡುವ ಒಂದೊಂದು ಶಬ್ದವು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿರುತ್ತದೆ.

ಅದರ ಪರಿವೆಯೇ ಇಲ್ಲದೆ, ತಮ್ಮ ಎಂದಿನ ಚಾಳಿಯಾದ ಕೋಮು ದ್ವೇಷವನ್ನು ಅಲ್ಲಿಂದಲೂ ಬಿಜೆಪಿ ಸಂಸದ ಹೊರ ಹಾಕಿರುವುದು ಸಂಸತ್ತಿನ ಇತಿಹಾಸದಲ್ಲಿ ಎಂದೂ ಅಳಿಸಲಾಗದ ಕಪ್ಪು ಚುಕ್ಕೆ ಎಂದೆ ಹೇಳಬೇಕು. ಇಂತಹ ಅಸಹ್ಯಕರ ಮಾತುಗಳನ್ನು ಪಕ್ಕದಲ್ಲಿ ಕುಳಿತು ಆಲಿಸುತ್ತಿದ್ದ ಬಿಜೆಪಿ ಹಿರಿಯ ನಾಯಕ ಹರ್ಷವರ್ಧನ್ ನಗುತ್ತಲೇ ಪರೋಕ್ಷವಾಗಿ ಆ ಮಾತುಗಳನ್ನು ಸಮರ್ಥಿಸುತ್ತಿದ್ದಿದ್ದು ಬಿಜೆಪಿ ಇಂತಹ ನೀಚತನವನ್ನು ಉದ್ದೇಶ ಪೂರ್ವಕವಾಗಿಯೇ ಪ್ರೋತ್ಸಾಹಿಸುತ್ತದೆ ಎಂಬುದಕ್ಕೆ ಸಾಕ್ಷಿ ಎಂದು ಮಜೀದ್ ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಸಂಸದ ಡ್ಯಾನಿಶ್ ಅಲಿ ಅವರನ್ನು ಭಯೋತ್ಪಾದಕ ಎಂದಿದ್ದಲ್ಲದೆ, ಇಡೀ ಮುಸ್ಲಿಂ ಸಮುದಾಯದ ಬಗ್ಗೆಯೂ ಬಿಜೆಪಿ ಸಂಸದ ಬಿಧೂರಿ ತುಚ್ಛವಾಗಿ ಮಾತನಾಡಿದ್ದಾರೆ. ಸಂಸತ್ ಕಲಾಪದಲ್ಲಿ. ಇಷ್ಟೆಲ್ಲಾ ಬೆಳವಣಿಗೆ ಆದರೂ ಸಭಾಧ್ಯಕ್ಷರು, ದುರ್ವರ್ತನೆ ತೋರಿದ ಸಂಸದರಿಗೆ ಕೇವಲ ಎಚ್ಚರಿಕೆ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಸದನದಲ್ಲಿ ಉಪಸ್ಥಿತರಿದ್ದ ಬಿಜೆಪಿ ಹಿರಿಯ ನಾಯಕ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೇವಲ ವಿಷಾದ ವ್ಯಕ್ತಪಡಿಸಿ ನುಣುಚಿಕೊಂಡಿದ್ದಾರೆ. ಇಂತ ಹೇಯ ನಡವಳಿಕೆಗೆ ಬಿಜೆಪಿ ಸಂಸದನನ್ನು ಸಂಸದ ಸ್ಥಾನದಿಂದ ವಜಾ ಮಾಡಲೇಬೇಕು. ಜೊತೆಗೆ ಪ್ರಧಾನಿಗಳು ಸಂಸತ್ತಿನಿಂದಲೇ ದೇಶದ ಜನರ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭಾರತದ ಪ್ರಜಾಪ್ರಭುತ್ವದ ಮಹಾ ಪಂಚಾಯತ್ ಆದ ಸಂಸತ್ತು ತನ್ನ ಗೌರವವನ್ನು ಕಳೆದುಕೊಳ್ಳುವ ಅಪಾಯ ಎದುರಿಸಬೇಕಾಗುತ್ತದೆ, ಎಂದು ಮಜೀದ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.