ಬೆಂಗಳೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ಯುವಕನ ಕಸ್ಟಡಿ ಸಾವು ಕುರಿತು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಬಹುತ್ವ ಕರ್ನಾಟಕ ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ನಡೆಸಿದ ಸತ್ಯಶೋಧನಾ ವರದಿಯನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ದಾವಣಗೆರೆಯ ಚನ್ನಗಿರಿಯಲ್ಲಿ 2024ರ ಮೇ 24ರಂದು ಜೂಜಾಟದ ಆರೋಪದ ಮೇಲೆ ಬಂಧಿತನಾಗಿದ್ದ ಆದಿಲ್ ಎಂಬ ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವನಪ್ಪಿದ್ದರು. ಆದರೆ, ಆತನ ಕುಟುಂಬಕ್ಕೆ ಪೋಸ್ಟ್ ಮಾರ್ಟಮ್ ಆಗುವ ತನಕ ಇದರ ಮಾಹಿತಿ ಇರಲಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಪೊಲೀಸ್ ಹಿಂಸಾಚಾರ ನಡೆದಿದ್ದಲ್ಲಿ, ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದರು. ಕೆಲವು ಪ್ರತಿಭಟನಾಕಾರರು ಪೊಲೀಸ್ ಹಾಗು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ್ದರು. ಪ್ರತಿಭಟನೆ ನಡೆಸಿದ, 300 ಜನರ ವಿರುದ್ಧ ಪೊಲೀಸರು ಕಾನೂನು ಬಾಹಿರ ಸಭೆ ನಡೆಸಿ, ಗಲಭೆ ಮತ್ತು ಹಾನಿ ಮಾಡಿರುವ ಕಾನೂನಿನ ಅಡಿಯಲ್ಲಿ 6 ಎಫ್‌ಐಆರ್‍ಗಳನ್ನು ದಾಖಲಿಸಿದ ನಂತರ, ಆದಿಲ್ ರವರ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿತ್ತು.
ಘಟನೆಯ ಕುರಿತು ಸುಮಾರು ನಾಲ್ಕು ಸಂಘಟನೆಗಳು ಸೇರಿ ನಡೆಸಿದ ಸತ್ಯಶೋಧನಾ ವರದಿಯನ್ನು ಇಂದು(ಆ.30) ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬಿಡುಗೊಳಿಸಲಾಯಿತು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸುತ್ತ ಮಾತನಾಡಿದ ಎಪಿಸಿಆರ್ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ನಿಝಾಮುದ್ದೀನ್, “ಆದಿಲ್ ಅವರನ್ನು ಪೊಲೀಸರು ಬಂಧಿಸಿದ ಕಾರಣಗಳಾಗಲೀ, ಬಂಧನದಲ್ಲಿದ್ದಾಗ ಸಾವನ್ನಪ್ಪಿದ ಮಾಹಿತಿಯಾಗಲೀ ಅವರ ಕುಟುಂಬಕ್ಕೆ ತಡರಾತ್ರಿಯವರೆಗೂ ತಿಳಿದಿರಲಿಲ್ಲ. ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕೂಡ ಇಲ್ಲದಿದ್ದ ಕಾರಣ ಸಾವಿನ ಬಗ್ಗೆ ಇದು ಹಲವಾರು ಪ್ರಶ್ನೆಗಳನ್ನೆಬ್ಬಿಸಿತ್ತು. ಈ ಘಟನೆಯಿಂದ ಚನ್ನಗಿರಿಯ ನಿವಾಸಿಗಳ ನಡುವೆ ಆತಂಕ ಉಂಟಾಗಿದ್ದು, ಕೆಲವರು ಈ ಚನ್ನಗಿರಿಯನ್ನೇ ಬಿಟ್ಟು ಹೋಗಿರುವುದು ಸಹ ನಿಜ” ಎಂದು ಮಾಹಿತಿ ಹಂಚಿಕೊಂಡರು.
ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ ಸದಸ್ಯರಾದ ಆಮೆಯ ಬೊಕಿಲ್ ಮಾತನಾಡಿ, ಠಾಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದಿದ್ದದ್ದು ಸರ್ವೋಚ್ಚ ನ್ಯಾಯಾಲದ ಆದೇಶಗಳ ನೇರ ಉಲ್ಲಂಘನೆ. ಬಂಧನದಲ್ಲಿ ಕೈದಿಗಳು ಮೃತಪಟ್ಟರೆ ಕಾನೂನು ಪ್ರಕಾರ ಮ್ಯಾಜಿಸ್ಟ್ರೇಟ್ ಮೂಲಕ ಒಂದು ತನಿಖೆ ನಡೆಸಬೇಕಿದೆ. ಆದರೆ ಇದನ್ನು ಮಾಡಿಲ್ಲ” ಎಂದು ತಿಳಿಸಿದರು.
“ಆದಿಲ್ ಅವರ ಸಾವು ಅಸ್ವಾಭಾವಿಕ ಸಾವೆಂದು ದಾಖಲಾಗಿದ್ದರೂ, ಅವರು ಮರಣ ಅನಾರೋಗ್ಯದಿಂದಾಗಿದ್ದ ಅಥವಾ ಪೊಲೀಸ್ ಹಿಂಸೆಯಿಂದಾಗಿದ್ದ ಎಂದು ಈವರೆಗೂ ತಿಳಿದಿಲ್ಲ. ಘಟನೆಯಾಗಿ ಮೂರು ತಿಂಗಳಾದರೂ, ಅವರ ಸಾವಿಗೆ ಸಂಬಂಧಿಸಿದಂತೆ ಈವರೆಗೆ ಎಫ್‌ಐಆರ್ ಕೂಡ ದಾಖಲಾಗಿಲ್ಲ ಎಂಬುದು ನಮ್ಮ ಸತ್ಯಶೋಧನೆಯ ವೇಳೆ ತಿಳಿದುಬಂದಿದೆ” ಹೇಳಿದರು.
ಪಿಯುಸಿಎಲ್‌ನ ಕಿಶೋರ್ ಗೋವಿಂದ್ ಮಾತನಾಡಿ, “ಆದಿಲ್ ಅವರ ಕುಟುಂಬಸ್ಥರ ಪ್ರಕಾರ, ಘಟನೆಯ ನಂತರ ಪೊಲೀಸರು 47 ಜನರನ್ನು ಬಂಧಿಸಿದ್ದಾರೆ. ಆದರೆ ಬಂಧಿತರಲ್ಲಿ ಹಲವರು ಘಟನೆ ನಡೆದಾಗ ಅಲ್ಲಿ ಇರಲೇ ಇಲ್ಲ. ಈ 47 ಜನರ ಕುಟುಂಬಗಳೊಂದಿಗೆ ನಡೆಸಿದ ಸಂದರ್ಶನಗಳ ವೇಳೆ, ಪೊಲೀಸರು ಇವರೆಲ್ಲರನ್ನು ಕಾನೂನು ಬಾಹಿರವಾಗಿ ಬಂಧಿಸಿರುವುದು ತಿಳಿದು ಬಂದಿದೆ” ಎಂದು ಹೇಳಿದರು.
ಕಸ್ಟಡಿ ಸಾವು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಬಂಧಿತರಾದ ಹಲವಾರು ಜನ ಬಡ ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬದವರಾಗಿದ್ದು, ಅವರ ಬಂಧನವು ಅವರ ಕುಟುಂಬದ ಮೇಲೆ ತೀವ್ರ ಪರಿಣಾಮ ಉಂಟು ಮಾಡಿದೆ” ಹೇಳಿದರು.
ಪಿಯುಸಿಎಲ್‌ನ ಐಶ್ವರ್ಯ ರವಿಕುಮಾರ್ ಮಾತನಾಡಿ, ಸರ್ಕಾರವು ಆದಿಲ್ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು. ಮಕ್ಕಳ ಶಿಕ್ಷಣಕ್ಕೆ ನೆರವು ಕಲ್ಪಿಸಬೇಕು ಹಾಗೂ ಕುಟುಂಬದವರಿಗೆ ಉದ್ಯೋಗಾವಕಾಶ ಕೂಡಲೇ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಆದಿಲ್ ಅವರ ಕಸ್ಟಡಿ ಸಾವಿನ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿರುವ ಲೋಪದೋಷಗಳು ಎದ್ದು ಕಾಣುತ್ತವೆ. ಈ ಕುರಿತು ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳ ಬೇಕು. ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಅಮಾಯಕರ ವಿರುದ್ಧ ಹಾಕಿರುವ ಕೇಸನ್ನು ಹಿಂದೆಗೆದುಕೊಳ್ಳಬೇಕು” ಎಂಬುದು ನಮ್ಮ ಒತ್ತಾಯ ಎಂದು ತಿಳಿಸಿದರು.
ಇನ್ನಷ್ಟು ವರದಿಗಳು
ಹಕ್ಕು ಕಾರ್ಯಕರ್ತ ಡಾ. ಸಾಯಿಬಾಬಾ ನಿಧನ: ಮಾನವ ಹಕ್ಕು ರಂಗಕ್ಕೆ ಅಪಾರ ನಷ್ಟ:ಪಿಯುಸಿಎಲ್.
ಮಹಾರಾಷ್ಟ್ರ, ಅಕ್ಷಯ ಶಿಂಧೆ ಜುಡಿಷಿಯಲ್ ಕಸ್ಟಡಿ ಹತ್ಯೆ: ಸಮಗ್ರ ತನಿಖೆಗೆ ಆಗ್ರಹಿಸಿದ ಪಿಯುಸಿಎಲ್.
ಮಾನವ ಹಕ್ಕು ಹೋರಾಟಗಾರ ಪಿ.ಬಿ.ಡೆ’ಸ್ಸಾ ನಿಧನ: ಪಿಯುಸಿಎಲ್ ಕರ್ನಾಟಕ ತೀವ್ರ ಸಂತಾಪ.