January 12, 2025

Vokkuta News

kannada news portal

ಕಾವೇರಿ ಜಲ,ಬೆಂಗಳೂರು ಬಂದ್ ಬಹುತೇಕ ಯಶಸ್ವಿ. ತ.ನಾ. ಗೆ ಮೂರುಸಾವಿರ ಕ್ಯೂಸೆಕ್ಸ್ ನೀರು: ಆದೇಶ.

ಬೆಂಗಳೂರು, ಸೆಪ್ಟಂಬರ್ 26: ಕಾವೇರಿ ಜಲ ವಿವಾದ ಮತ್ತು ನೀರು ಹಂಚಿಕೆ ವಿಷಯದಲ್ಲಿ ಬೆಂಗಳೂರಿನಲ್ಲಿ ಇಂದು ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತು ರೈತರು ಹಮ್ಮಿಕೊಂಡಿದ್ದ ಬಂದ್‌ ಬಹುತೇಕ ಯಶಸ್ವಿಯಾಗಿದೆ. ಪ್ರತಿಭಟನಾಕಾರರು ವಿನೂತನವಾಗಿ ಪ್ರದರ್ಶನ ಮಾಡಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾಕಾರರು ಜಮಾವಣೆ ಗೊಂಡು ಪ್ರತಿಭಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಭಟನಾಕಾರರು ಸಲ್ಲಿಸಿದ ಮನವಿ ಆಲಿಸಿದ್ದಾರೆ.

ಈ ನಡುವೆ, ಕಾವೇರಿ ಪ್ರಾಧಿಕಾರ ಮತ್ತೆ ಮೂರು ಸಾವಿರ ಕ್ಯೂಸೆಕ್ಸ್ ನೀರನ್ನು, ಮುಂದಿನ 18ದಿನದ ವರೆಗೆ ತಮಿಳುನಾಡುವಿಗೆ ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದ್ದು, ಕರ್ನಾಟಕದ ಹೋರಾಟಗಾರರನ್ನು ಇನ್ನಷ್ಟು ರೇಗಿಸಿದೆ.
ಕರ್ನಾಟಕ ಜಲಸಂರಕ್ಷಣಾ ಸಮಿತಿ ಕರೆಕೊಟ್ಟಿದ್ದ ಬಂದ್‌ಗೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಮಂಗಳವಾರ ಬೆಳಗ್ಗೆಯಿಂದಲೇ ಬಂದ್‌ಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಆರಂಭದಲ್ಲಿಯೇ ಜನರ ಚಲನವಲನ ಕ್ಷೀಣಿಸಿತ್ತು. ನಗರದಲ್ಲಿ ಬಹುತೇಕ ಅಂಗಡು ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ನೀಡಲಾಗಿತ್ತು.
ಬೆಂಗಳೂರು ಸೇರಿದಂತೆ , ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ರೈತ , ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ, ರಾಜ್ಯ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೊಶ ವ್ಯಕ್ತಪಡಿಸಿವೆ.

100 ಕ್ಕೂ ಅಧಿಕ ಮಂದಿಯ ಬಂಧನ.

ಬೆಳಿಗ್ಗೆ 11 ಗಂಟೆಗೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗಿನ ದಾರಿಯಲ್ಲಿ ಭಾರಿ ರ್ಯಾಲಿ ಆಯೋಜಿಸಲು ಪ್ರಯತ್ನಿಸಿದ ಪ್ರತಿಭಟನಾ ಕಾರರನ್ನು ಪೊಲೀಸರು ತಡೆದಿದ್ದಾರೆ ಮತ್ತು ಭಾರೀ ಪೊಲೀಸ್ ಬಂದೋ ಬಸ್ತ್ ನಡೆಸಲಾಗಿತ್ತು.

ಖಾಸಗಿ ವಾಹನಗಳ ಓಡಾಟ ನಗರದಲ್ಲಿ ಬಹುತೇಕ ಸ್ಥಗಿತ ಗೊಂಡಿತ್ತು, ಮೆಟ್ರೋ, ಬಿಎಂಟಿಸಿ ಬಸ್ ಸಂಚಾರ ಇದ್ದರೂ ಪ್ರಯಾಣಿಕರು ವಿರಳ ಸಂಖ್ಯೆಯಲ್ಲಿ ಇದ್ದರು ಬಂದ್ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಶುಕ್ರವಾರದ ಬಂದ್‌ಗೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಪ್ರತಿಭಟನೆ ಅವಕಾಶವಿದೆ, ಆದರೆ ಬಲವಂತವಾಗಿ ಬಂದ್ ಮಾಡಿದರೆ, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದರೆ ಸಂಘಟಕರನ್ನು ಹೊಣೆ ಮಾಡಲಾಗುವುದು ಎಂದು ಹೇಳಿದರು.

ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಇನ್ನೂ 18 ದಿನಗಳ ಕಾಲ ನಿತ್ಯವೂ 3,000 ಕ್ಯೂಸೆಕ್ ಹರಿಸಲು ಕರ್ನಾಟಕಕ್ಕೆ ಇಂದು ಆದೇಶ ನೀಡಿದೆ. ಇದು ನಿಜಕ್ಕೂ ಆಘಾತಕಾರಿ, ಕಾವೇರಿ ಮತ್ತು ಕನ್ನಡಿಗರ ಪಾಲಿಗೆ ಮರಣಶಾಸನ ಎಂದು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿತ್ಯ 12,500 ಕ್ಯೂಸೆಕ್ಸ್ ನೀರು ಬಿಡುಗಡೆಗೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ತಿರಸ್ಕಾರ ಮಾಡಿದ್ದು ಸಂತಸ ತಂದಿದೆ. ನಮ್ಮ ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ತಮಿಳುನಾಡಿಗೆ ಮತ್ತೆ 18 ದಿನಗಳ ಕಾಲ ಪ್ರಾಧಿಕಾರ 3 ಸಾವಿರ ಕ್ಯೂಸೆಕ್ ನೀರನ್ನ ಬಿಡಲು ಹೇಳಿದೆ. ಇದು ಕರ್ನಾಟಕ್ಕೆ ಅನ್ಯಾಯ, ಮೋಸ. ಯಾರು ಹೇಳೋರಿಲ್ಲ ಕೇಳೋರಿಲ್ಲ. ಇದು ಕನ್ನಡಿಗರ ಕಣ್ಣೀರಿನ ವ್ಯಥೆಯಾಗಿದೆ ಎಂದು ವಾಟಾಳ್‌ ನಾಗರಾಜ್‌ ಬೆಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯವರನ್ನು ಮೊದಲು ಚಡ್ಡಿಗಳು ಎಂದೇ ಕರೆಯಲಾಗುತ್ತಿತ್ತು, ಈಗ ಚಡ್ಡಿ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾವೇರಿಗಾಗಿ ಅವರ ಪ್ರತಿಭಟನೆಗೆ ನಮ್ಮ ತಕರಾರಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ನೆಲ, ಜಲ, ಭಾಷೆಯ ವಿಷಯವನ್ನು ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಕ್ಷಣವೇ ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಹೋರಾಟ ಮಾಡಲಾಗುವುದು. ರಾಜ್ಯದಲ್ಲಿ ನೀರಿನ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಹೀಗಾಗಿ, ಜನರು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.