June 13, 2024

Vokkuta News

kannada news portal

ಭಾ.ರಾ. ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ.

ಬಹುನಿರೀಕ್ಷಿತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌‌ ಪಕ್ಷದ ಆಂತರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟ ವಾಗಿದ್ದು , ನಿರೀಕ್ಷೆಯಂತೆ ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ‌ ಅವರು ಭಾರಿ ಬಹುಮತಗಳಿಂದ ಬುಧವಾರ ಆಯ್ಕೆಯಾಗಿದ್ದಾರೆ. ಈ ಮೂಲಕ ಸುಮಾರು ದ್ವಿ ದಶಕಗಳ ನಂತರ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ ಮೊದಲ ಗಾಂಧಿಯೇತರ ನಾಯಕರಾಗಿ ಮೂಡಿ ಬಂದಿದ್ದಾರೆ.

ಪಕ್ಷದ ಹೊಸ ಅಧ್ಯಕ್ಷರನ್ನು ಖರ್ಗೆ ಅವರ ಪ್ರತಿಸ್ಪರ್ಧಿ ಶಶಿ ತರೂರ್‌ ಅಭಿನಂದಿಸಿದ್ದು, “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿರುವುದು ದೊಡ್ಡ ಗೌರವ ಮತ್ತು ದೊಡ್ಡ ಜವಾಬ್ದಾರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಆ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 7897 ಮತಗಳನ್ನು ಪಡದಿದ್ದು, ಅವರ ಪ್ರತಿಸ್ಪರ್ಧಿ ಶಶಿ ತರೂರ್‌ 1072 ಮತಗಳನ್ನು ಪಡೆದಿದ್ದಾರೆ. 416 ಮತಗಳು ತಿರಸ್ಕೃತಗೊಂಡಿದ್ದು, ಒಟ್ಟು 9385 ಮತಗಳು ಚಲಾವಣೆಯಾಗಿದ್ದವು.
ಸಾವಿರಕ್ಕೂ ಹೆಚ್ಚು ಸಹೋದ್ಯೋಗಿಗಳ ಬೆಂಬಲವನ್ನು ಪಡೆದಿರುವುದು ಮತ್ತು ಭಾರತದಾದ್ಯಂತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅನೇಕ ಹಿತೈಷಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಹೊತ್ತುಕೊಂಡಿದ್ದು ಒಂದು ಸುಯೋಗವಾಗಿತ್ತು” ಎಂದು ಶಶಿ ತರೂರ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಆಂತರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದ ಓರ್ವ ಹಿರಿಯ ಮುತ್ಸದ್ದಿ, ಪರಿಶಿಷ್ಟ ಸಮುದಾಯದ ವ್ಯಕ್ತಿ ಯಾದ ಮಲ್ಲಿಕಾರ್ಜುನ ಖರ್ಗೆ ರವರಿಗೆ ಅತ್ಯಂತ ಮಹತ್ವದ ಮತ್ತು ಜವಾಬ್ದಾರಿ ಹುದ್ದೆ ಪ್ರಾಪ್ತವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ ನಂತರ ಹಾಲಿ ಅವರಿಗೆ ಪಕ್ಷದ ವತಿಯಿಂದ ಉನ್ನತ ಹುದ್ದೆ ಪ್ರಾಪ್ತವಾಗಿದೆ.