November 18, 2024

Vokkuta News

kannada news portal

ದ.ಕ.ಜಿಲ್ಲೆಯಿಂದ ಬಹುಜನ ಸಮಾಜ ಪಕ್ಷದಿಂದ ಕಾಂತಪ್ಪ ಅಲಂಗಾರ್ ಅಭ್ಯರ್ಥಿ.

ಮಂಗಳೂರು, ಮಾ. 26: ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಿಂದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದಿಂದ ಕಾಂತಪ್ಪ ಅಲಂಗಾರ್ ಅವರು ಲೋಕ ಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಗೋಪಾಲ ಮುತ್ತೂರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಎನ್‌ಎಂಪಿಟಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿರುವ ಕಾಂತಪ್ಪ ಅಲಂಗಾರ್ 2020ರಲ್ಲಿ ನಿವೃತ್ತರಾಗಿದ್ದು, ಜಿಲ್ಲೆಯಲ್ಲಿ ಅಂಬೇಡ್ಕರ್‌ವಾದಿ ಚಳವಳಿಯಲ್ಲಿ ನಿರಂತರ ಗುರುತಿಸಿಕೊಂಡಿರುವ ಓರ್ವ ವ್ಯಕ್ತಿಯಾಗಿದ್ದಾರೆ, ಎಂದರು.

ಇದರ ಜೊತೆಗೆ ರಾಷ್ಟ್ರೀಯ ಸಮಾಜದ ಪರಿವರ್ತನಾ ಚಳುವಳಿಯಲ್ಲಿ ಮಹಾಪುರುಷರಾದ ಮಹಾತ್ಮ ಜ್ಯೋತಿಬಾಫುಲೆ, ಶಾಹುಮಹಾರಾಜ್, ಬಾಬಾ ಸಾಹೇಬ್ ಅಂಬೇಡ್ಕರ್ ಸಿದ್ದಾಂತದ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ಮಾನ್ಯ ಕಾನ್ಶಿರಾಮ್ ನೇತೃತ್ವದ ಬಹುಜನ ಪಕ್ಷ ಕರ್ನಾಟದಕದಲ್ಲಿ ಉದಯಗೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವಿಸ್ತರಣೆಗೊಳ್ಳಲು ಇವರ ಕೊಡುಗೆಯು ಇದೆ. ದ.ಕ. ಜಿಲ್ಲೆಯಲ್ಲಿನ ಅಂಬೇಡ್ಕರ್‌ವಾದಿ ಚಳುವಳಿಯಲ್ಲಿ ಇವರು ಮುಂಚೂಣಿಯಲ್ಲಿದ್ದು ಸಮತಾ ಸೈನಿಕ ದಳದ ನಾಯಕತ್ವವನ್ನು ವಹಿಸಿ ಅನೇಕ ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಂಡ ಅನುಭವ ಕೂಡಾ ಇವರಿಗೆ ಇರುತ್ತದೆ ಸಾಮಾಜಿಕ ಚಳುವಳಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ದೀರ್ಘ ಸೇವೆ ಸಲ್ಲಿಸಿದ್ದು, ಮುಖ್ಯವಾಗಿ ದಕ್ಷಿಣಕನ್ನಡ ಜಿಲ್ಲೆಯ ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಬದುಕಿನ ಆಗುಹೋಗುಗಳ ಮೂಲ ತಿಳುವಳಿಕೆ ಇದ್ದು ತುಳುನಾಡಿನ ಅಸ್ಮಿತೇ ಹಾಗೂ ಸಾರ್ವಜನಿಕ ಕುಂದುಕೊರತೆಗಳ ಬೇಡಿಕೆಗಳ ಪರವಾಗಿ ನಡೆದ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿರುತ್ತಾರೆ.

ಪಕ್ಷವು ರಾಜ್ಯದಲ್ಲಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಬಿಜೆಪಿ ಹಾಗೂ ಇತರ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡಿನ ಹೆಸರಿನಲ್ಲಿ ಉದ್ಯಮಿಗಳಿಂದ ಹಣ ವಸೂಲಿಗೈದು ಅವರ ಪರವಾಗಿದ್ದಾರೆ. ಆದರೆ ಬಿಎಸ್‌ಪಿ ಯಾವುದೇ ಉದ್ಯಮಿಗಳಿಂದ ಹಣ ಪಡೆದಿಲ್ಲ ಎಂದರು. ಸಂವಿಧಾನದ ಮೂಲಕ ಸಂಸದರಾಗಿ ಆಯ್ಕೆಯಾದವರೇ ಈಗಯ್ ಸಂವಿಧಾನ ಬದಲಾಯಿಸುವ ಮಾತನಾಡುತ್ತಿರುವುದು ದೇಶ ದ್ರೋಹವಾಗಿದ್ದು, ಈ ಬಗ್ಗೆ ರಾಜ್ಯ ಸರಕಾರವೂ ಯಾವುದೇ ದಿಟ್ಟ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಇದಕ್ಕಿಂತಲೂ ಅಪಾಯಕಾರಿ ಸ್ಥಿತಿ ಎಂದರೆ, ಬಿಜೆಪಿ ಹಾಗೂ ಅದರ ಸರಕಾರವನ್ನು ವಿರೋಧಿಸುವ ಯಾರೇ ಆಗಲಿ ಅವರ ಮೇಲೆ ಈಡಿ, ಐಟಿ ಹಾಗೂ ಸಿಬಿಐ ಇಲಾಖೆಗಳಿಂದ ದಾಳಿ ನಡೆಸಿ ರಾಜಕೀಯವಾಗಿ ಬೆದರಿಸುವ ಹಾಗೂ ಒತ್ತಡ ಹೇರುವ ಕಾರ್ಯಗಳು ನಡೆಯುತ್ತಿದೆ. ಬಿಜೆಪಿಯ ಈ ನಡವಳಿಕೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಹೇಳಿದರು.

ಇದುವರೆಗೆ ದೇಶ, ರಾಜ್ಯವನ್ನು ಆಳಿ ಕೊಂಡು ಬಂದ ಕಾಂಗ್ರೆಸ್, ಬಿಜೆಪಿ ಪಕ್ಷಗಳ ದುರಾಡಳಿತ ಹಾಗೂ ಜನವಿರೋಧಿ ನೀತಿಗಳಿಂದ ಜನ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್, ಬಿಜೆಪಿಗಳ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಷಡ್ಯಂತ್ರ ಹಾಗೂ ರಾಜಕಾರಣ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಿಜೆಪಿಯು ಯಾವ ಪಕ್ಷಗಳೂ ಮಾಡಲಾಗದ ಹಾನಿಯನ್ನು ಅನಾಹುತವನ್ನು ಅನ್ಯಾಯವನ್ನು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಮಾಡಿದೆ. ಅದರಲ್ಲೂ ಜಡೆಪಿ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ 2014ರಲ್ಲಿ ಬಂದ ನಂತರ ಸಂವಿಧಾನಕ್ಕೆ ಮತ್ತು ಸಂವಿಧಾನಿಕ ಸಂಸ್ಥೆಗಳಿಗೆ ಯಾವುದೇ ಬೆಲೆಯಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ದ.ಕ. ಲೋಕಸಭಾ ಕ್ಷೇತ್ರದಿಂದ ಕಾಂತಪ್ಪ ಅಳಂಗಾರ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅದ್ದರಿಂದ ನಿಮ್ಮ ಅಮೂಲ್ಯ ಮತವನ್ನು ಬಿ.ಎಸ್.ಪಿ.ಯ ಆನೆ ಚಿಹ್ನೆಗೆ ನೀಡಿ ಬೆಂಬಲಿಸಿ ಆಶೀರ್ವದಿಸಬೇಕೆಂದು ತುಳು ನಾಡಿನ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇರುವ ನಾಗರಿಕ ಮತದಾರರಲ್ಲಿ ಈ ಮೂಲಕ ಮನವಿ ಮಾಡುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿಯ ಮುಖಂಡರಾದ ನಾರಾಯಣ ಬೋಧ್, ದೇವಪ್ಪ ಬೋಧ್, ಶಿವಪ್ಪ ಗಾರ್ಡಾಡಿ, ಕಿರಣ್ ಎಡಪದವು, ಪಿ.ಎಸ್. ಶ್ರೀನಿವಾಸ್, ಶಶಿಕಲಾ, ಕಿರಣ್, ಶಿವರಾಮ್ ಪೇಜಾವರ ಉಪಸ್ಥಿತರಿದ್ದರು.