July 26, 2024

Vokkuta News

kannada news portal

ಬ್ರಾಹ್ಮಣರೆಲ್ಲರೂ ಕೋಮುವಾದಿಗಳಲ್ಲ, ಪ್ರಜಾಪ್ರಭುತ್ವಕ್ಕೆ ಹಾನಿಗೈಯುವವರ ವಿರುದ್ಧ ದ್ವನಿ ಮೊಳಗಿಸಿ: ಮಂಗಳೂರಿನಲ್ಲಿ ಬ್ರಾಹ್ಮಣ ಮುಖಂಡರ ಸಭೆ.

ಮಂಗಳೂರು: ʻʻನಾವು ಕೋಮುವಾದಿಗಳಲ್ಲ, ಬ್ರಾಹ್ಮಣರೆಲ್ಲರೂ ಬಿಜೆಪಿಗರಲ್ಲ, ಧಾರ್ಮಿಕ ಸಹಿಷ್ಣುತೆ ಈ ಕಾಲಘಟ್ಟದ ಅತಿ ಮುಖ್ಯ ಅಗತ್ಯ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವವರ ವಿರುದ್ಧ ನಾವು ಧ್ವನಿ ಎತ್ತುತ್ತೇವೆ.ʼʼ

ಇದು ಕರಾವಳಿಯ ಪ್ರಜ್ಞಾವಂತ ಬ್ರಾಹ್ಮಣ ಮುಖಂಡರ ಸ್ಪಷ್ಟ ಸಂದೇಶ. ಬ್ರಾಹ್ಮಣರೆಲ್ಲರೂ ಸಂಘಪರಿವಾರ, ಬಿಜೆಪಿ ಜೊತೆ ಇದ್ದಾರೆ ಎಂಬ ಸುಳ್ಳನ್ನು ಪ್ರಚುರಪಡಿಸಲು ನೆರೆದಿದ್ದ ನೂರಕ್ಕೂ ಹೆಚ್ಚು ಪ್ರಜ್ಞಾವಂತ ಬ್ರಾಹ್ಮಣರು ಕೂಡಿ ತೆಗೆದುಕೊಂಡ ನಿರ್ಣಯ.

ಕರ್ನಾಟಕದಲ್ಲಿ ಹಿಂದುತ್ವದ ಮೊದಲ ಪ್ರಯೋಗಶಾಲೆಯಾಗಿ ಗುರುತಿಸಿಕೊಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನಾ ಬಗೆಯ ಕೋಮುಘರ್ಷಣೆಗಳಿಗೆ, ಅನೈತಿಕ ಪೊಲೀಸ್‌ ಗಿರಿಗಳಿಗೆ, ಕೊಲೆ-ಪ್ರತೀಕಾರದ ಕೊಲೆಗಳಿಗೆ ಕುಖ್ಯಾತಿ ಪಡೆದು‌ ಬಿಟ್ಟಿದೆ. ಈ ಕಳಂಕದಿಂದ ಹೊರಗೆ ಬರಲು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರಜ್ಞಾವಂತ ನಾಗರಿಕರು ಮೊದಲಿನಿಂದಲೂ ಬೇರೆ ಬೇರೆ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಕೋಮು ಸಾಮರಸ್ಯವನ್ನು ಜೀವಂತವಾಗಿ ಇಡಲು ಪ್ರಯತ್ನಿಸುತ್ತಾ ಬಂದಿದ್ದಾರೆ

ಇದೀಗ ಬ್ರಾಹ್ಮಣ ಸಮುದಾಯದ ಪ್ರಜ್ಞಾವಂತರು ಒಂದಾಗಿ, ಸಾಮರಸ್ಯದ ದೀಪ ಹಚ್ಚಲು ಮುಂದಾಗಿದ್ದಾರೆ. ಸಮಾಜದಲ್ಲಿ ಬೇರೂರಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವುದರ ಜೊತೆಗೆ ಬ್ರಾಹ್ಮಣ ಸಮುದಾಯವೂ ಕೋಮುವಾದದ ವಿರುದ್ಧ ನಿಲ್ಲಲಿದೆ ಎಂದು ಸಾರುವ ಪ್ರಯತ್ನ ನಡೆದಿದೆ. ಕರಾವಳಿಯ ರಾಜಕಾರಣ ಮತ್ತು ಸಾಮಾಜಿಕ ಬದುಕಿನಲ್ಲಿ ಈ ಹೊಸ ಹೆಜ್ಜೆಯ ಪರಿಣಾಮಗಳೇನು? ಈ ಪ್ರಯತ್ನಗಳು ಎಷ್ಟರ ಮಟ್ಟಿಗೆ ಸಫಲವಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಖ್ಯಾತ ಚಿಂತಕ ರಾಜಾರಾಮ ತೋಳ್ಪಾಡಿ, ಇಂದು ದುರಿತ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರಲಾಗುತ್ತಿದೆ. ಸಮಾನ ಮನಸ್ಕ ಬ್ರಾಹ್ಮಣರು ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಸಮುದಾಯದ ಜನರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಎಂದರು.

ಬ್ಯಾಂಕ್ ನೌಕರ ಸಂಘದ ಹಿರಿಯ ನಾಯಕ ಟಿ.ಆರ್.ಭಟ್ ಮಾತನಾಡಿ, “ಬ್ರಾಹ್ಮಣರೆಲ್ಲರೂ ಯಾವುದೋ ಒಂದು ಸಿದ್ಧಾಂತ ಅಥವಾ ರಾಜಕೀಯ ಪಕ್ಷಕ್ಕೇ ಸೇರಿದ್ದಾರೆ ಎಂಬ ಭಾವನೆ ಬೆಳೆಯುತ್ತಿರುವುದು ಕಳವಳಕಾರಿ. ಇಂಥ ನಿಲುವುಗಳ ವಿರುದ್ಧ ನಾವು ಮಾತನಾಡಬೇಕು ಎಂದರು.
ಕಾರ್ಯಕ್ರಮದ ಸಂಘಟಕ ಎಂ.ಜಿ.ಹೆಗಡೆ ಮಾತನಾಡಿ, ಬಿಜೆಪಿ ಮತ್ತು ಕೋಮು ಸಂಘಟನೆಗಳಿಗೆ ಬೆಂಬಲಿಸದ ಬ್ರಾಹ್ಮಣರಿಗೆ ಕೌಟುಂಬಿಕ ಕಿರುಕುಳ ನೀಡುವುದು, ಸಾರ್ವಜನಿಕವಾಗಿ ಹೀಯಾಳಿಸುವ, ವ್ಯವಹಾರಿಕವಾಗಿ ತೊಂದರೆ ಕೊಡುವ ಮೂಲಕ ಭಯದ ವಾತಾವರಣ ಹುಟ್ಟಿಸಲಾಗುತ್ತಿದೆ, ಇದು ಅತ್ಯಂತ ಆಘಾತಕಾರಿ ವಿಷಯ ಎಂದು ಹೇಳಿದರು.
ನಾವು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ಸರ್ಕಾರ ನೀಡುವ ಸವಲತ್ತು ಸಿಗುವಂತೆ ಮಾಡಬೇಕು. ಕೇವಲ ರಾಜಕೀಯ ವಿರೋಧಕ್ಕಾಗಿ ದ್ವೇಷಿಸುವ ಬೆದರಿಸುವ, ಕಿರುಕುಳ ನೀಡುವ ಕೀಳು ಮನಸ್ಥಿತಿಯಿಂದ ಕೆಲವರು ಹೊರಬರಬೇಕು. ಇದರಿಂದ. ಅನಗತ್ಯ ಸಂಘರ್ಷ ಉಂಟಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಆಯ್ಕೆ ವ್ಯಕ್ತಿಯ ಸ್ವಾತಂತ್ರ್ಯ. ಇದಕ್ಕೂ ವಿರೋಧ ಎಂದರೆ ಅಪಾಯಕಾರಿ. ಇಷ್ಟು ದಿನ ಸಹಿಸಿಕೊಂಡಿದ್ದೇವೆ. ಇನ್ನು ಉತ್ತರಿಸುವ ದಾರಿ ಹುಡುಕುತ್ತೇವೆ , ಕೋಮುವಾದಿ ಬ್ರಾಹ್ಮಣರಿಂದ ಇಂತಹ ಕಿರುಕುಳ ಆದರೆ ನಮ್ಮ ಗಮನಕ್ಕೆ ತನ್ನಿ. ನಾವು ಒಟ್ಟಾಗಿ ಎದುರಿಸೋಣ” ಎಂದು ಅವರು ಹೇಳಿದರು.

ಸುರತ್ಕಲ್ ಹಿರಿಯ ಮುಖಂಡ ಗುರುರಾಜ ಆಚಾರ್ಯ, ಸಮುದಾಯದ ಮುಖಂಡರುಗಳಾದ ಬೆಟ್ಟ ರಾಜಾರಾಮ ಭಟ್ಟ, ಮಹೇಶ ಕುಮಾರ ಸುಳ್ಯ, ಸತ್ಯೇಂದ್ರ ವೇಣೂರು, ನಿವೃತ್ತ ಹಿರಿಯ ಬ್ಯಾಂಕ್ ಅಧಿಕಾರಿ ಟಿ.ಆರ್.ಭಟ್ಟ, ಡಾ. ಶಿವಾನಂದ ಮುಂಡಾಜೆ, ರಮೇಶ ಕೋಟೆ, ಕೆ.ರಾಘವೇಂದ್ರ, ವಿನಯ ಆಚಾರ್ಯ, ಬೆಟ್ಟ ಜಯರಾಮ ಭಟ್ಟ, ದಿನೇಶ್ ರಾವ್, ಬಾಲಕೃಷ್ಣ ಭಟ್ಟ, ಕೆಮ್ಮಟ್ಟು, ವಕೀಲೆ ವಿದ್ಯಾ ಭಟ್ಟ, ನಮಿತಾ ರಾವ್ , ಚೈತನ್ಯಾ ಭಟ್ಟ, ಪ್ರವೀಣ ಭಟ್ಟ ಪುತ್ತೂರು ಮತ್ತು ಇನ್ನೂ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.