June 13, 2024

Vokkuta News

kannada news portal

ಆನಂದ್ ಸ್ವರೂಪ್ ಸ್ವಾಮಿ, ಕುರಾನ್, ನಮಾಜ್ ವಿರುದ್ಧ ಹೇಳಿಕೆ : ಮುಸ್ಲಿಮ್ ಒಕ್ಕೂಟ ಖಂಡನೆ: ಕೆ.ಅಶ್ರಫ್,

ಇತ್ತೀಚೆಗೆ ಚೌಧುರಿ ಚರಣ್ ಸಿಂಗ್ ಯುನಿವರ್ಸಿಟಿಯಲ್ಲಿ ನಡೆದ ಸೆಮಿನಾರ್ ನಲ್ಲಿ ಸ್ವಾಮಿ ಆನಂದ್ ಸ್ವರೂಪ್ ರವರು ಮತಿಭ್ರಮಣೆಯಾದಂತೆ ಮಾತಾಡುತ್ತಾ ಮುಸ್ಲಿಮರನ್ನು ಅವಹೇಳನ ಮಾಡಿ ನಮಾಜ್ ಹಾಗೂ ಕುರಾನ್ ಗ್ರಂಥವನ್ನು ನಿಂದಿಸಿರುವುದು ಖಂಡನೀಯವಾಗಿದೆ. ಮಾತ್ರವಲ್ಲ ಈ ಹೇಳಿಕೆ ಕೋಮುಗಲಭೆ ಸ್ರಷ್ಟಿಸುವ ಹುನ್ನಾರವಾಗಿದೆ. ಆದುದರಿಂದ ಇವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಕುರಾನ್ ಪಠಿಸುವವರು ರಾಕ್ಷಸ ರಾಗುತ್ತಾರೆ, ಅವರು ಮನುಷ್ಯ ರಾಗಿರುವುದಿಲ್ಲ, ಯಾರಿಗಾದರೂ ಭಾರತದಲ್ಲಿ ಇರಬೇಕೆಂದು ಇಚ್ಚೆಯಿದ್ದರೆ ಅವರು ನಮಾಝ್ ಮತ್ತು ಕುರಾನ್ ಅನ್ನು ತ್ಯಜಿಸಬೇಕು, ಇಲ್ಲದಿದ್ದರೆ ನಾವೆಲ್ಲರೂ ಸೇರಿ ಅವರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಿಷ್ಕಾರ ಮಾಡಿದರೆ ಅವರು ಹಿಂದೂ ಧರ್ಮಕ್ಕೆ ಮತಾಂತರವಾಗುತ್ತಾರೆ. ಎಂಬಿತ್ಯಾದಿಯಾಗಿ ಅವಹೇಳನಾತ್ಮಕ ಹೇಳಿಕೆ ನೀಡಿರುವ ಸ್ವಾಮೀಜಿ ಮಾನಸಿಕ ಸಮತೋಲನವನ್ನು ಕಳೆದುಕೊಂಡಿರಬಹುದೇ ಎಂಬ ಸಂಶಯವನ್ನೂ ಮೂಡಿಸುತ್ತದೆ. ಆದುದರಿಂದ ಇವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಅಗತ್ಯವೂ ಇದೆ. ಎಂದು ಅಶ್ರಫ್ ರವರು ತಿಳಿಸಿದ್ದಾರೆ.

ಭಾರತವು ಎಲ್ಲಾ ಜಾತಿ ಧರ್ಮ ದವರೀಗೂ ಸಮಾನ ಅವಕಾಶವನ್ನು ನೀಡಿರುವ, ಒಂದು ಉತ್ತಮ ಸಂವಿಧಾನವನ್ನು ಹೊಂದಿರುವ, ಜಾತ್ಯತೀತ ರಾಷ್ಟ್ರವಾಗಿದೆ. ಇಲ್ಲಿ ಎಲ್ಲರೀಗೂ ಅವರವರ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಇದೆ. ಸ್ವಾಮೀಜಿಗಳ ಹೇಳಿಕೆ ಅಪರಾಧನೀಯ ಮತ್ತು ಭಾರತದ ಜಾತ್ಯಾತೀತ ನೆಲೆ ಗಟ್ಟನ್ನು ದ್ವಂಸ ಗೊಳಿಸುವ ಹೇಳಿಕೆ ಆಗಿದೆ.

ಸ್ವಾಮಿ ಆನಂದ್ ಸ್ವರೂಪ್ ಕುರಾನ್ ಮತ್ತು ನಮಾಝ್ ನ ಪದ ಬಳಕೆ ಮಾಡಿ ಮತೀಯ ಸಂಘರ್ಷ ಮೂಡಿಸಲು ಪ್ರಯತ್ನಿಸಿದ್ದಾರೆ. ಜನಸಾಮಾನ್ಯರು ಇವರ ಈ ದುರುದ್ದೇಶವನ್ನು ಅರ್ಥಮಾಡಿಕೊಂಡು ಇಲ್ಲಿನ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಅಶ್ರಫ್ ರವರು ಮನವಿ ಮಾಡಿದ್ದಾರೆ.

ದೇಶದಾದ್ಯಂತ ರೈತರು ತಮ್ಮ ಹಕ್ಕಿಗಾಗಿ ತೀವ್ರವಾಗಿ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಸ್ವಾಮೀಜಿಯ ಈ ಹೇಳಿಕೆ ಜನರ ಗಮನವನ್ನು ಬೇರೆ ಕಡೆ ತಿರುಗಿಸಲು ಮಾಡಿರುವ ಹುನ್ನಾರದಂತೆಯೂ ಕಂಡುಬರುತ್ತದೆ.

ಕುರಾನ್ ಬಹಳ ಪವಿತ್ರವಾದ ಗ್ರಂಥ. ಇದರ ಸಂದೇಶ ಎಲ್ಲಾ ಕಾಲಕ್ಕೂ ಉಪಯುಕ್ತ. ಕುರಾನ್ ಶಾಂತಿ, ಪ್ರೀತಿ, ಸ್ನೇಹ, ಸೌಹಾರ್ದತೆ ಮತ್ತು ಸಮಾನತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ.

ಸ್ವಾಮೀಜಿಯ ಅಸಂಬದ್ಧ ಹೇಳಿಕೆ ಭಾರತದ ಸಂವಿಧಾನಕ್ಕೂ ಅಪಚಾರವಾಗಿದೆ. ಆದುದರಿಂದ ಸರ್ವಧರ್ಮೀಯರು ಒಗ್ಗಟ್ಟಾಗಿ ಈ ಹೇಳಿಕೆಯನ್ನು ಖಂಡಿಸುವ ಅಗತ್ಯ ಇದೆ ಎಂದು ಅಶ್ರಫ್ ರವರು ಒತ್ತಾಯಿಸಿದ್ದಾರೆ.