July 10, 2025

Vokkuta News

kannada news portal

ಉಸ್ತುವಾರಿ ಸಚಿವರು, ಗೃಹ ಸಚಿವರು, ಸ್ಪೀಕ‌ರ್ ಯಾರೂ ಪ್ರತ್ಯುತ್ತರ ನೀಡಲಿಲ್ಲ. ಒಟ್ಟು”ಶಾಂತಿ ಸಭೆ” ನಡೆಯಿತು: ಮುನೀರ್ ಕಾಟಿಪಳ್ಳ.

ಗೃಹ ಸಚಿವರ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ಶಾಂತಿ ಸಭೆಗೆ ಆಗಮಿಸಿದ ದಲಿತ ಸಂಘಟನೆ, ಕಾರ್ಮಿಕ ಸಂಘಟನೆಯ ಮುಖಂಡರನ್ನು “ಆಹ್ವಾನ ನೀಡಿಲ್ಲ” ಎಂಬ ಕಾರಣ ನೀಡಿ ಒಳಗಡೆ ಬಿಡದೆ ಹೊರಗಡೆ ನಿಲ್ಲಿಸಿರುವುದು ಬೇಸರದ ಸಂಗತಿ. ಸುನ್ನಿ ಸಂಘಟನೆಗಳಿಗೂ ಆಹ್ವಾನ ನೀಡಿಲ್ಲ ಎಂಬ ಆರೋಪ ಇದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಲ್ಲ ಹೇಳಿದ್ದಾರೆ.

ದುಡಿಯುವ ವರ್ಗಗಳ, ದಲಿತ ಚಳವಳಿಗಳ ಪ್ರತಿನಿಧಿಗಳು ಇಲ್ಲದೆ ಅದೆಂತ ಶಾಂತಿ ಸಭೆ ! ಶಿಕ್ಷಣ ಸಂಸ್ಥೆಗಳ, ರಿಯಲ್ ಎಸ್ಟೇಟ್ ಕಂಪೆನಿಗಳ ಒಡೆಯರುಗಳ ಇದ್ದರೆ, ಮತಾಡಿದರೆ ಸಾಕೆ ? ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನು, ಬಿಜೆಪಿ ಶಾಸಕರುಗಳ ಮಾತು, ” ನಿಮ್ಮ ಶಾಂತಿ ಸಭೆ, ಕಠಿಣ ಕ್ರಮಗಳಿಗೆ ನಾವು ಸೊಪ್ಪು ಹಾಕುವುದಿಲ್ಲ” ಎಂದು ನೇರವಾಗಿ ಹೇಳಿದಂತಿತ್ತು. ತಾವು ಶಾಸಕರುಗಳು ಎಂಬುದನ್ನು ಮರೆತು “ಹಿಂದುಗಳನ್ನು ಮಾತ್ರ ಪ್ರತಿನಿಧಿಸುತ್ತೇವೆ” ಎಂಬಂತೆ ಮಾತಾಡಿದರು. ದ್ವೇಷ ಭಾಷ ಕೇಳಿ ಯಾರೂ ಹಿಂಸೆಗೆ ಇಳಿಯುವುದಿಲ್ಲ “ಗೋ ಹತ್ಯೆ” “ಲವ್ ಜಿಹಾದ್” ಗಳಿಗೆ ಪ್ರತಿಕ್ರಿಯೆಗಳು ಮಾತ್ರ ಬರುತ್ತಿವೆ ಎಂದು ನೇರವಾಗಿಯೆ ಹೇಳಿದರು. ಇದಕ್ಕೆ ಉಸ್ತುವಾರಿ ಸಚಿವರು, ಗೃಹ ಸಚಿವರು, ಸ್ಪೀಕರ್ ಯಾರೂ ಪ್ರತ್ಯುತ್ತರ ನೀಡಲಿಲ್ಲ. ಒಟ್ಟು “ಶಾಂತಿ ಸಭೆ” ನಡೆಯಿತು.

ಅಂದ ಹಾಗೆ ಉಸ್ತುವಾರಿ ಸಚಿವರಿಗೆ ಕಮ್ಯೂನಿಸ್ಟ್‌ ಮುಖಂಡರು, ದಲಿತ ನಾಯಕರು ಯಾರೊಬ್ಬರ ಪರಿಚಯವೂ ಇಲ್ಲ. ಧಣಿಗಳದ್ದು ಮಾತ್ರ ಹೆಸರಿಡಿದು ಮಾತಾಡಲು ಕರೆಯುವಷ್ಟು ದಟ್ಟ ಪರಿಚಯ ಇತ್ತು ಎಂದು ಹೇಳಿದ್ದಾರೆ. ಶಾಂತಿ ಸಭೆ ಕರೆದು ಸೀಮಿತ ಚರ್ಚೆ ಮತ್ತು ಫಲಿತಾಂಶ ಶೂನ್ಯ ಸಭೆಯ ಬಗ್ಗೆ ವಿಮರ್ಶೆ ಆಗಬೇಕಿದೆ ಎಂದಿದ್ದಾರೆ.