June 11, 2026

Vokkuta News

kannada news portal

ಕರ್ನಾಟಕ ಚುನಾವಣೆ: 2 ಪರಿಷತ್, 1 ರಾಜ್ಯ ಸಭಾ ಸ್ಥಾನ ಮುಸ್ಲಿಮ್ ಅಭ್ಯರ್ಥಿಗೆ ನೀಡಿ: ರಾಜ್ಯ ಮುಸ್ಲಿಮ್ ಒಕ್ಕೂಟ ಕರೆ.

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ : ಕಾಂಗ್ರೆಸ್ ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಆಗ್ರಹ

ಬೆಂಗಳೂರು ಜೂನ್ 01:  ರಾಜ್ಯಸಭೆಗೆ ಕರ್ನಾಟಕದಿಂದ ನಾಲ್ಕು ಸ್ಥಾನಗಳಿಗೆ ಹಾಗು ಕರ್ನಾಟಕ ವಿಧಾನ ಪರಿಷತ್ ನ ಏಳು ಸ್ಥಾನಗಳಿಗೆ ಜೂನ್ 18 (2026) ರಂದು ಮತದಾನ ನಡೆಯಲಿದೆ. ಈ ಏಳು ಪರಿಷತ್ ಸ್ಥಾನಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸುಲಭವಾಗಿ ನಾಲ್ಕು ಸ್ಥಾನಗಳನ್ನು ಗೆಲ್ಲಲಿದೆ. ಈ ನಾಲ್ಕು ಸ್ಥಾನಗಳ ಪೈಕಿ ಕನಿಷ್ಠ ಎರಡು ಸ್ಥಾನಗಳನ್ನು ಹಾಗು ಕನಿಷ್ಠ ಒಂದು ರಾಜ್ಯ ಸಭಾ ಸ್ಥಾನವನ್ನು ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಕರ್ನಾಟಕ ವಿಧಾನ ಪರಿಷತ್ ನಲ್ಲಿರುವ ಒಟ್ಟು 75 ಸ್ಥಾನಗಳ ಪೈಕಿ ರಾಜ್ಯದ ಮುಸ್ಲಿಮರ 13% ಜನಸಂಖ್ಯೆಗೆ ಹೋಲಿಸಿದರೆ ಕನಿಷ್ಠ 9 ರಿಂದ 10 ಮುಸ್ಲಿಮ್ ವಿಧಾನ ಪರಿಷತ್ ಸದಸ್ಯರು ಇರಬೇಕಿತ್ತು. ಆದರೆ ಈಗಿರುವುದು ಕೇವಲ 4 ಮುಸ್ಲಿಮ್ ವಿಧಾನ ಪರಿಷತ್ ಸದಸ್ಯರು. ಅಂದರೆ ಸೂಕ್ತ ಪ್ರಾತಿನಿಧ್ಯದ ಅರ್ಧಕ್ಕಿಂತಲೂ ಕಡಿಮೆ ಸಂಖ್ಯೆ. ಕಾಂಗ್ರೆಸ್ ಸರಕಾರ ಬಂದ ಮೇಲೆ ವಿಧಾನ ಪರಿಷತ್ ನ 15 ಸ್ಥಾನಗಳ ಆಯ್ಕೆ ಅವಕಾಶವಿತ್ತು. ಆಡಳಿತಾರೂಢ ಕಾಂಗ್ರೆಸ್ ಗೆ ಅದರಲ್ಲಿ ಮುಸ್ಲಿಮ್ ಸಮುದಾಯಕ್ಕೆ ನ್ಯಾಯಯುತ ಪ್ರಾತಿನಿಧ್ಯ ಕಲ್ಪಿಸುವ ಅತ್ಯುತ್ತಮ ಅವಕಾಶವಿತ್ತು. ಅದರಲ್ಲಿ ಕೇವಲ ಒಬ್ಬ ಮುಸಲ್ಮಾನರಿಗೆ ಅವಕಾಶ ನೀಡಲಾಗಿದೆ. 2025 ರಲ್ಲಿ ನಡೆದ ನಾಲ್ಕು ವಿಧಾನ ಪರಿಷತ್ ಸ್ಥಾನಗಳ ನಾಮನಿರ್ದೇಶನದಲ್ಲಿ ಒಬ್ಬೇ ಒಬ್ಬ ಮುಸ್ಲಿಮರಿಗೆ ಅವಕಾಶ ಸಿಕ್ಕಿಲ್ಲ.

ಕರ್ನಾಟಕದ ಒಟ್ಟು 12 ರಾಜ್ಯಸಭಾ ಸದಸ್ಯರ ಪೈಕಿ ಒಬ್ಬರು ಮಾತ್ರ ಮುಸ್ಲಿಮರು. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಕನಿಷ್ಠ ಇಬ್ಬರು ಲೋಕಸಭಾ ಸದಸ್ಯರು ಮುಸ್ಲಿಮ್ ಸಮುದಾಯದಿಂದ ಇರುತ್ತಿದ್ದರು. ಆದರೆ ಈಗ ಮುಸ್ಲಿಮ್ ಸಮುದಾಯದಿಂದ ಒಬ್ಬೇ ಒಬ್ಬ ಲೋಕಸಭಾ ಸದಸ್ಯರು ಇಲ್ಲ. ಕಾಂಗ್ರೆಸ್ ನಿಂದ ಮುಸ್ಲಿಮರಿಗೆ ಕೊಡುವ ಲೋಕಸಭಾ ಟಿಕೆಟ್ ಸಂಖ್ಯೆಯೇ ಕೇವಲ ಒಂದಕ್ಕೆ ಇಳಿದಿದೆ. ರಾಜ್ಯಸಭಾ ಸದಸ್ಯರು ಒಬ್ಬರು ಮಾತ್ರ ಇದ್ದಾರೆ. ಸಂಸತ್ತಿನಲ್ಲಿ ರಾಜ್ಯದ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ತೀರಾ ಕುಸಿದು ಹೋಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವಲ್ಲಿ ಮುಸ್ಲಿಮ್ ಸಮುದಾಯ ನಿರ್ಣಾಯಕ ಪಾತ್ರ ವಹಿಸಿದೆ. ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ಹಾಕಿದೆ. ಬೇರೆ ಯಾವುದೇ ಸಮುದಾಯಕ್ಕೆ ಹೋಲಿಸಿದರೆ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಮತ ಚಲಾಯಿಸಿ ಅದು ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಕೊಡುಗೆ ನೀಡಿದೆ.

ಆದರೆ ರಾಜ್ಯ ಸಚಿವ ಸಂಪುಟದಲ್ಲಿ, ವಿಧಾನ ಪರಿಷತ್ ನಲ್ಲಿ, ಅಧಿಕಾರಶಾಹಿಯಲ್ಲಿ, ಸರಕಾರದ ಪ್ರಮುಖ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ನಿಗಮ ಮಂಡಳಿಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಅವರ ಜನಸಂಖ್ಯೆ ಹಾಗು ಅವರು ಕಾಂಗ್ರೆಸ್ ಗೆ ನೀಡಿರುವ ಬೆಂಬಲಕ್ಕೆ ಹೋಲಿಸಿದರೆ ತೀರಾ ಕಡಿಮೆಯಿದೆ. ಸಾಲದ್ದಕ್ಕೆ ಕಾಂಗ್ರೆಸ್ ಟಿಕೆಟ್ ಕೊಡುವ ಅತ್ಯುತ್ತಮ ಅವಕಾಶ ಇರುವಲ್ಲೂ ಮುಸ್ಲಿಮ್ ಸಮುದಾಯಕ್ಕೆ ಅಭ್ಯರ್ಥಿತನ ಕೊಡುವುದಿಲ್ಲ ಎಂಬ ಸಂದೇಶ ಸಮುದಾಯಕ್ಕೆ ರವಾನೆಯಾಗಿದೆ.

ಹಾಗಾಗಿ ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕನಿಷ್ಠ ಎರಡು ಸ್ಥಾನಗಳನ್ನು ಪಕ್ಷದ ಮುಸ್ಲಿಮ್ ಮುಖಂಡರಿಗೆ ಕೊಟ್ಟು ಕಾಂಗ್ರೆಸ್ ಈ ಕೊರತೆಯನ್ನು ತುಂಬಬೇಕಾಗಿದೆ. ಇತ್ತೀಚಿಗೆ ಕಾಂಗ್ರೆಸ್ ನಾಯಕ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಪ್ರತಿಪಾದಿಸಿರುವ ಆಶಯಗಳಿಗೂ ಇದು ಪೂರಕ ನಡೆಯಾಗಲಿದೆ. ಪಕ್ಷದ ಸಂಘಟನಾ ರಚನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಮತ್ತು ಭಾಗವಹಿಸುವಿಕೆ ಸಿಗುವಂತೆ ಅಲ್ಪಸಂಖ್ಯಾತ ಘಟಕ ಕಾರ್ಯನಿರ್ವಹಿಸಬೇಕು ಎಂದು ರಾಹುಲ್ ಗಾಂಧಿ ಅವರು ಸೂಚಿಸಿದ್ದಾರೆ ಎಂದು ವರದಿಯಾಗಿತ್ತು. ಹಾಗಾಗಿ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದಲ್ಲಿ ಪಕ್ಷ ಕನಿಷ್ಠ ಎರಡು ವಿಧಾನ ಪರಿಷತ್ ಸ್ಥಾನಗಳನ್ನು ಹಾಗು ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಕನಿಷ್ಠ ಒಂದು ಸ್ಥಾನವನ್ನು ಮುಸ್ಲಿಮರಿಗೆ ಕೊಟ್ಟು ಪಕ್ಷದ ಉನ್ನತ ನಾಯಕತ್ವ ಹಾಗು ಸಿದ್ಧಾಂತದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಕರ್ನಾಟಕ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಪರವಾಗಿ ಸುಹೇಲ್ ಅಹ್ಮದ್ ಮರೂರ್ 80504 75788, ತನ್ವಿರ್ ಅಹ್ಮದ್ ,98861 94492 ಮತ್ತು ಯಹ್ಯಾ ದಾಮೂದಿ 97398 66895 ರವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.