June 13, 2024

Vokkuta News

kannada news portal

ಮಂಗಳೂರು: ಫಾಝಿಲ್, ಮಸೂದ್ ಪ್ರಕರಣದಲ್ಲಿ ಸರ್ಕಾರದ ತಾರತಮ್ಯ ನೀತಿ ವಿರೋಧಿಸಿ ನಾಳೆ ಬೃಹತ್ ಪ್ರತಿಭಟನೆ

ಮೃತ ಮಸೂದ್ ಹಾಗೂ ಫಾಝಿಲ್ ಮನೆ ಸಂತ್ರಸ್ತರಿಗೆ ಸರಕಾರದ ವತಿಯಿಂದ ಅಧಿಕೃತ ಪ್ರತಿನಿಧಿ ಭೇಟಿ ನೀಡಿ 25 ಲಕ್ಷ ರೂಪಾಯಿ ಮೊತ್ತಕ್ಕೆ ಕಡಿಮೆ ಇರದಂತೆ ಪರಿಹಾರ ನೀಡಬೇಕು ಎಂದು ಆಗ್ರಹ

ಮಂಗಳೂರು: ಸುರತ್ಕಲ್ ಫಾಝಿಲ್ ಮತ್ತು ಸುಳ್ಯದ ಮಸೂದ್ ಹತ್ಯೆಯನ್ನು ಖಂಡಿಸಿ ಹಾಗೂ ಸರ್ಕಾರ ಕೃತ್ಯದ ನಂತರ ನಡೆದುಕೊಂಡ ತಾರತಮ್ಯ ನೀತಿಯನ್ನು ವಿರೋಧಿಸಿ ಸುರತ್ಕಲ್ ನ ಮುಸ್ಲಿಂ ಐಕ್ಯತಾ ವೇದಿಕೆ ವತಿಯಿಂದ ಸೆ.16ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.

ಸೆ.16ರ ಪ್ರತಿಭಟನೆಗೆ ದ.ಕ.ಜಿಲ್ಲೆ ಮುಸ್ಲಿಮ್ ಒಕ್ಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು, ಬೆಂಬಲ ಸೂಚಿಸಿದ್ದಾರೆ.

ಶುಕ್ರವಾರ ಸಂಜೆ 4 ಗಂಟೆಗೆ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜಮಾಅತ್ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ಳಾರೆಯ ಮಸೂದ್ ಹಾಗೂ ಸುರತ್ಕಲ್ ನ ಫಾಝಿಲ್ ಕೊಲೆ ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಸಬೇಕು. ಮೃತ ಮಸೂದ್ ಹಾಗೂ ಫಾಝಿಲ್ ಮನೆ ಸಂತ್ರಸ್ತರಿಗೆ ಸರಕಾರದ ವತಿಯಿಂದ ಅಧಿಕೃತ ಪ್ರತಿನಿಧಿ ಭೇಟಿ ನೀಡಿ 25 ಲಕ್ಷ ರೂಪಾಯಿ ಮೊತ್ತಕ್ಕೆ ಕಡಿಮೆ ಇರದಂತೆ ಪರಿಹಾರ ನೀಡಬೇಕು. ಪ್ರವೀಣ್ ನೆಟ್ಟಾರು ಪ್ರಕರಣವನ್ನು ಎನ್.ಐ.ಎ ಕೇಂದ್ರ ತನಿಖಾ ಸಂಸ್ಥೆಗೆ ತನಿಖೆಗೆ ವಹಿಸಿದಂತೆ ಈ ಪ್ರಕರಣವನ್ನೂ ವಹಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಈ ಹೋರಾಟ ಹಮ್ಮಿಕೊಳ್ಳಲಾಗಿದೆ.

ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸುಳ್ಯದ ಮಸೂದ್, ಸುರತ್ಕಲ್ ಫಾಝಿಲ್ ಹತ್ಯೆ ನಂತರದ ಬೆಳವಣಿಗೆಯಲ್ಲಿ ಸರಕಾರ ಪರಿಹಾರ ಮೊತ್ತ ವಿತರಣೆ, ಹತ್ಯೆಯ ಆರೋಪಿಗಳ ತನಿಖೆಯನ್ನು ಎನ್.ಐ. ಎ ಕೇಂದ್ರ ತನಿಖಾ ತಂಡಕ್ಕೆ ವಹಿಸಿ ಕೊಡಲು ನಿರಾಕರಣೆ ಇತ್ಯಾದಿ ವಿಷಯದಲ್ಲಿ ಮತೀಯ ತಾರತಮ್ಯ ನೀತಿ ವಿರೋಧಿಸಿ ಸೆ.16ರ ಶುಕ್ರವಾರ ಮಂಗಳೂರಿನ ಕ್ಲಾಕ್ ಟವರ್ ಹತ್ತಿರ ಬೃಹತ್ ಪ್ರತಿಭಟನೆ ನಡೆಯಲಿದೆ, ಈ ಪ್ರತಿಭಟನೆಗೆ ಮುಸ್ಲಿಮ್ ಒಕ್ಕೂಟ ಬೆಂಬಲ ನೀಡಲಿದ್ದು, ಶಾಂತಿಯುತ, ಪ್ರಜಾಸತ್ತಾತ್ಮಕ ಈ ಪ್ರತಿಭಟನೆಗೆ ಸರ್ವರೂ ಹಾಜರಾಗಬೇಕು ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಮುಸ್ಲಿಮ್ ಪ್ರಮುಖ ಮುಖಂಡರ ನಿಯೋಗವು ಬೆಂಗಳೂರಿಗೆ ತೆರಳಿ ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯನವರನ್ನು, ಶಾಸಕ ಮತ್ತು ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಯು.ಟಿ. ಖಾದರ್ ರವರ ನೇತೃತ್ವದಲ್ಲಿ ಭೇಟಿ ಮಾಡಿ ಈ ಬೆಳವಣಿಗೆಯ ಬಗ್ಗೆ ದ್ವನಿ ಎತ್ತಲು ಮನವಿ ಮಾಡುವುದರೊಂದಿಗೆ ಇತರ ಪ್ರಮುಖ ನಾಯಕರಾದ ಬಿ.ಕೆ.ಹರಿಪ್ರಸಾದ್,ಕುಮಾರಸ್ವಾಮಿ,ಡಿ.ಕೆ.ಶಿವಕುಮಾರ್, ಬಿ.ಎಂ.ಫಾರೂಕ್,ರಮೇಶ್ ಕುಮಾರ್, ಬಿ.ಝಡ್.ಝಮೀರ್ ಅಹ್ಮದ್ ಖಾನ್,ಪ್ರಿಯಾಂಕ ಖರ್ಗೆ ಮುಂತಾದವರನ್ನು ಭೇಟಿ ಮಾಡಿ ಅವಹಾಲು ಸಲ್ಲಿಸಲಾಗಿತ್ತು.