July 27, 2024

Vokkuta News

kannada news portal

ಅ.15,ಉಳ್ಳಾಲ ತಾಲೂಕು ದ್ವಿತೀಯ ಬ್ಯಾರಿ ಸಾಹಿತ್ಯ ಸಮ್ಮೇಳನ : ಸಮ್ಮೇಳನಾಧ್ಯಕ್ಷರಾಗಿ ಬಿ. ಎ.ಮೊಹಮ್ಮದ್ ಹನೀಫ್.

ಮಂಗಳೂರು: ಉಳ್ಳಾಲ ತಾಲೂಕು ವ್ಯಾಪ್ತಿಯ ಬ್ಯಾರಿ ಸಾಹಿತ್ಯ ಸಮ್ಮೇಳನ ದಿನಾಂಕ 15-10-2022ನೇ ಶನಿವಾರ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ದೇರಳಕಟ್ಟೆ ಕಣಚೂರ್ ಪಬ್ಲಿಕ್ ಸ್ಕೂಲ್ ಕ್ಯಾಂಪಸ್ಸಿನಲ್ಲಿ ಜರುಗಲಿದೆ. ಉಳ್ಳಾಲ ತಾಲೂಕು ಎರಡನೇ ಬ್ಯಾರಿ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಅಡ್ವಕೇಟ್ ಬಿ. ಎ. ಮುಹಮ್ಮದ್ ಹನೀಫ್ ಆಯ್ಕೆ ಆಗಿದ್ದಾರೆ. ಮೇಲ್ತೆನೆ ಸಾಹಿತ್ಯ ಸಂಸ್ಥೆಯ ಆಶ್ರಯದಲ್ಲಿ ಈ ಸಮ್ಮೇಳನ ನಡೆಯಲಿದೆ. ನಝೀರ್ ಉಳ್ಳಾಲ್ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದು, ಮೇಲ್ತೆನೆ ಸಂಸ್ಥೆಯ ಅಧ್ಯಕ್ಷರಾಗಿ ಮೊಹಮ್ಮದ್ ಬಾಷಾ ನಾಟಿಕಲ್ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.

ಬಿ. ಎ. ಮುಹಮ್ಮದ್ ಹನೀಫ್ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ 2014 – 2017ರ ಅವಧಿಯಲ್ಲಿ 20 ಸಾವಿರ ಪದ ಸಂಗ್ರಹವಿರುವ ಬ್ಯಾರಿ-ಕನ್ನಡ-ಇಂಗ್ಲಿಷ್ ಶಬ್ದಕೋಶ ಪ್ರಕಟಿಸುವುದರ ಮೂಲಕ ಬ್ಯಾರಿ ಭಾಷೆಗೊಂದು ಆಯಾಮ ಒದಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರಾಜ್ಯದ ಬೇರೆ ಬೇರೆ ಜಮಾಅತಿನ 400ಕ್ಕೂ ಅಧಿಕ ದಫ್ ಕಲಾವಿದರಿಗೆ ಗೌರವಧನ ನೀಡಿ ಪ್ರೋತ್ಸಾಹ, ಅನೇಕ ಬ್ಯಾರಿ ಕೃತಿಗಳ, ಕ್ಯಾಸೆಟ್‌ಗಳ ಬಿಡುಗಡೆ, ಬ್ಯಾರಿ ಕಿರುಚಿತ್ರ ನಿರ್ಮಾಣ, ನೂರಾರು ಬ್ಯಾರಿ ಮತ್ತು ಬಹುಭಾಷಾ ಕವಿಗೋಷ್ಠಿಗಳ ಆಯೋಜನೆ, ಬ್ಯಾರಿ ಸಾಂಸ್ಕೃತಿಕ ಚಟುವಟಿಕೆಗಳು, ಅಕ್ಟೋಬರ್ 3 ರಂದು ಬ್ಯಾರಿ ಭಾಷಾ ದಿನಾಚರಣೆ, ಬ್ಯಾರಿ ಫಲೋಷಿಪ್ ಅಧ್ಯಯನ ಗ್ರಂಥ ಪ್ರಕಟಣೆ, ನೂರು ಕವಿಗಳ‌ ಕವನಗಳನ್ನೊಳಗೊಂಡ “ಬ್ಯಾರಿ ಕಾವ್ಯ ಸಂಪುಟ” ಲೋಕಾರ್ಪಣೆ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರದ ಅನುಮೋಧನೆ ಇಂತಹ ಪ್ರಗತಿಪರ ಸಾಧನೆಯ ಮೂಲಕ ಹನೀಫ್‌ರವರು ತಮ್ಮ ಅವಧಿಯಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ರಾಜ್ಯದ ಅತ್ಯುತ್ತಮ ಅಕಾಡೆಮಿ ಎಂಬ ದರ್ಜೆಗೆ ಏರಿಸಿದ್ದರು,ಎಂದು ಮಾಜಿ ಕರ್ನಾಟಕ ಆಹಾರ ಇಲಾಖೆ ಸಲಹಾ ಸಮಿತಿ ಸದಸ್ಯ ಮೊಹಮ್ಮದ್ ಆಲಿ ಕಮ್ಮರಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಶೋಧನಾ ಸಾಹಿತಿಯೂ ಆಗಿರುವ ಹನೀಫ್‌ರವರ ‘ಜಾತಿ,ಧರ್ಮ ಮತ್ತು ಮೀಸಲಾತಿ’, ‘ಬ್ಯಾರಿ ಆದೋಲನದ ಹೆಜ್ಜೆಗಳು’, ‘ನಮ್ಮೂರು’ ಮತ್ತು ‘ಬ್ಯಾರಿ ಅಧ್ಯಯನ -2008’ ಎಂಬ ಕೃತಿಗಳು ಪ್ರಕಟವಾಗಿದೆ. ಈ ಹಿಂದೆ ಮುಸ್ಲಿಮ್ ವಿಕಾಸ ಪರಿಷತ್, ಅಖಿಲ ಭಾರತ ಬ್ಯಾರಿ ಸಾಹಿತ್ಯ ಪರಿಷತ್,ಅಹಿಂದ ಜಿಲ್ಲಾ ಸಂಘಟನೆ ಇತ್ಯಾದಿ, ವಿವಿಧ ಸಂಘ, ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಬಿ.ಎ.ಮುಹಮ್ಮದ್ ಹನೀಫ್‌ರವರಿಗೆ ಅತ್ಯಂತ ಅರ್ಹವಾಗಿಯೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಂದಿದೆ. ಉಳ್ಳಾಲ ತಾಲೂಕು ಎರಡನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಮೊಹಮ್ಮದ್ ಆಲಿ ಕಮ್ಮರಡಿ ಹಾರೈಸಿದ್ದಾರೆ.