July 27, 2024

Vokkuta News

kannada news portal

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ತಜ್ಞರಾಗಿ ಕೋಲಾರದ ಪ್ರೊ.ಕೆ ಪಿ ಅಶ್ವಿನಿ ನೇಮಕ

ಕೋಲಾರ ಮೂಲದ ಪ್ರೊ.ಕೆ ಪಿ ಅಶ್ವಿನಿ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ʼಸಮಕಾಲೀನ ವರ್ಣಭೇದ ನೀತಿ ಮತ್ತು ಅಸಹಿಷ್ಣುತೆʼ ಕುರಿತ ವಿಶೇಷ ತಜ್ಞೆಯಾಗಿ ನೇಮಕಗೊಂಡಿದ್ದಾರೆ.

ಈ ಸ್ಥಾನಕ್ಕೆ ನೇಮಕವಾದ ಮೊದಲ ಏಷ್ಯಾ ಮತ್ತು ಮೊದಲ ಭಾರತೀಯ ಯುವತಿ ಅಶ್ವಿನಿಯವರಾಗಿದ್ದು, ಜಿನೀವಾ ಮೂಲದ 47 ಸದಸ್ಯರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಅವರ ನೇಮಕಾತಿಯನ್ನು ಅ.14ರಂದು ಅನುಮೋದಿಸಿದೆ.

ಜಾಂಬಿಯಾದ ಇ. ಟೆಂಡಾಯಿ ಅಚಿಯುಮೆ ತಮ್ಮ ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಮುನ್ನವೇ ರಾಜೀನಾಮೆ ನೀಡಿದ ಕಾರಣ ಆ ಹುದ್ದೆಯು ಖಾಲಿಯಾಗಿತ್ತು. ಆ ಸ್ಥಾನಕ್ಕೆ ದಲಿತ ಕಾರ್ಯಕರ್ತೆ ಮತ್ತುವಿಜ್ಞಾನದ ಪ್ರಾಧ್ಯಾಪಕಿ ಅಶ್ವಿನಿ ಅವರನ್ನು ನೇಮಿಸಲಾಗಿದೆ.

ಕೌನ್ಸಿಲ್‌ನ ಅಧ್ಯಕ್ಷರಿಗೆ ಸಲಹಾ ಸಮಿತಿ ಶಿಫಾರಸು ಮಾಡಿದ ಮೂವರು ಸದಸ್ಯರ ಅಂತಿಮ ಪಟ್ಟಿಯಲ್ಲಿ ಅಶ್ವಿನಿ ಅವರ ಹೆಸರು ಇತ್ತು. ಅಶ್ವಿನಿ ಅವರ ಹೆಸರಿನ ಜೊತೆಗೆ, ಅಂತಿಮ ಪಟ್ಟಿಯಲ್ಲಿ ಭಾರತದ ಜೋಶುವಾ ಕ್ಯಾಸ್ಟೆಲಿನೊ ಮತ್ತು ಬೋಟ್ಸ್‌ವಾನಾದ ಯೂನಿಟಿ ಡೌ ಅವರ ಹೆಸರು ಕೂಡ ಇದ್ದವು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿತ ಅಧ್ಯಕ್ಷರು ಅಂತಿಮವಾಗಿ ಅಶ್ವಿನಿ ಅವರನ್ನು ನಾಮನಿರ್ದೇಶನ ಮಾಡಿದರು. ಶುಕ್ರವಾರ ನಡೆದ 51ನೇ ಅಧಿವೇಶನದ ಮುಕ್ತಾಯಕ್ಕೂ ಮೊದಲು ಅಧಿಕೃತವಾಗಿ ಈ ನೇಮಕವನ್ನು ಘೋಷಿಸಲಾಯಿತು. ಅಶ್ವಿನಿ ಅವರಿಗೆ ಮೂರು ವರ್ಷ ಅಧಿಕಾರಾವಧಿ ಇದ್ದು, ನವೆಂಬರ್ 1 ರಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.