April 20, 2026

Vokkuta News

kannada news portal

ಮುಸ್ಲಿಮ್ ಸಂಘಟನೆಗಳಿಂದ ಕಾಂಗ್ರೆಸ್ ವರಿಷ್ಠರಿಗೆ ಅವಹಾಲು ಪತ್ರ, ಬೇಡಿಕೆ ಈಡೇರದಿದ್ದರೆ ಕವಲು ದಾರಿ?.

ಬೆಂಗಳೂರು: ಕಾಂಗ್ರೆಸ್ ಪಕ್ಷ ರಾಜ್ಯದ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟವು ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಮತ್ತು ಡಾ. ನಾಸಿರ್ ಹುಸೇನ್ ಇವರಿಗೆ ಪತ್ರ ಬರೆದಿದೆ.

2023 ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಮುಸ್ಲಿಮರು ಇಡೀ ದೇಶಕ್ಕೆ ಮಾದರಿಯಾಗುವಂತಹ ಒಂದು ಧನಾತ್ಮಕ ನಿರ್ಧಾರ ತೆಗೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಕಾಂಗ್ರೆಸ್ ಅಲ್ಲದೆ ಬೇರೆ ಪಕ್ಷಗಳ ಆಯ್ಕೆ ಇದ್ದರೂ  ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಜಾತ್ಯತೀತ ಸರಕಾರ ಬರಬೇಕು ಎಂಬ ಕಾರಣಕ್ಕಾಗಿ  ಮುಸ್ಲಿಮರು ಕಾಂಗ್ರೆಸ್ ಗೆ ಒಗ್ಗಟ್ಟಾಗಿ ಬೆಂಬಲಿಸಿದರು. ಅದರ ಪರಿಣಾಮವಾಗಿಯೇ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂತು.

ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್ ಪಕ್ಷ ತನ್ನನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮುಸ್ಲಿಂ ಸಮುದಾಯವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಸರಕಾರದಲ್ಲಿ, ಆಡಳಿತಶಾಹಿಯಲ್ಲಿ, ಇತರ ಪ್ರಮುಖ ನೇಮಕಾತಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಈ ಸರಕಾರ ಸೂಕ್ತ ಪ್ರಾತಿನಿಧ್ಯ ಕೊಡಲೇ ಇಲ್ಲ. ಸಮುದಾಯಕ್ಕೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ಈ ಬಗ್ಗೆ ಆಗಾಗ ಸರಕಾರದ, ಪಕ್ಷದ ಗಮನಕ್ಕೆ ತಂದರೂ ಯಾವುದೇ ಸೂಕ್ತ ಸ್ಪಂದನೆ ಸಿಗಲಿಲ್ಲ ಹಾಗೂ ಕೊರತೆ ತುಂಬುವ ಕ್ರಮ ಕೈಗೊಳ್ಳಲಿಲ್ಲ.

ಮುಸ್ಲಿಂ ಸಮುದಾಯದ ಜೊತೆ ಕಾಂಗ್ರೆಸ್ ಪಕ್ಷ ತಾರತಮ್ಯದ ನೀತಿ ಅನುಸರಿಸುವುದು, ಅನ್ಯಾಯಯುತವಾಗಿ ನಡೆದುಕೊಳ್ಳುವುದು ಈಗ ಸರ್ವೇ ಸಾಮಾನ್ಯವಾಗಿದೆ ಎಂಬುದನ್ನು ಬಹಳ ಬೇಸರದಿಂದ ಹೇಳಬೇಕಾಗಿದೆ.

ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ಹಾಗೂ ಮತದಾನದ ಬಳಿಕ ಕಾಂಗ್ರೆಸ್ ನಡೆದುಕೊಂಡಿರುವ ರೀತಿಯಿಂದ ರಾಜ್ಯದ ಮುಸ್ಲಿಂ ಸಮುದಾಯಕ್ಕೆ ತೀವ್ರ ಆಘಾತವಾಗಿದೆ.

ನ್ಯಾಯವಾಗಿ ನೀಡಲೇಬೇಕಾಗಿದ್ದ ಟಿಕೆಟ್ ಅನ್ನು ನಿರಾಕರಿಸಲಾಯಿತು, ಹಾಗೆ ನಿರಾಕರಿಸುವಾಗ ಮುಸ್ಲಿಂ ಸಮುದಾಯದ ನ್ಯಾಯಯುತ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಅಷ್ಟೇ ಅಲ್ಲ, ಟಿಕೆಟ್ ಕೇಳಿದ್ದೇ ಅಪರಾಧ ಎಂಬಂತೆ ಕಾಂಗ್ರೆಸ್ ವರಿಷ್ಠರು ಮುಸ್ಲಿಂ ಸಮುದಾಯದ ಜೊತೆ ನಡೆದುಕೊಂಡರು.

ದಶಕಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯ ಮುಸ್ಲಿಂ  ನಾಯಕರನ್ನು ಯಾವುದೇ ಸೂಕ್ತ ಕಾರಣ ನೀಡದೆ, ವಿವರಣೆಗೆ ಅವಕಾಶವನ್ನೂ ನೀಡದೆ ಏಕಾಏಕಿ ವಜಾ ಮಾಡಲಾಗಿದೆ.

ಕಾಂಗ್ರೆಸ್ ನ ಮುಸ್ಲಿಂ ಸಮುದಾಯದ ನಾಯಕರ ವಿರುದ್ಧ ಪಕ್ಷದಲ್ಲಿರುವ ಬೇರೆ ಮುಸ್ಲಿಂ ನಾಯಕರನ್ನೇ ಎತ್ತಿ ಕಟ್ಟುವ ತೀರಾ ಕೆಟ್ಟ ಪ್ರಯತ್ನವೂ ಕಾಂಗ್ರೆಸ್ ವರಿಷ್ಠರಿಂದ ನಡೆಯುತ್ತಿದೆಯೇ ಎಂಬ ಗಂಭೀರ ಅನುಮಾನವೂ ಸಮುದಾಯವನ್ನು ಕಾಡುತ್ತಿದೆ.

ಇದು ಕೇವಲ ಕೆಲವು ವ್ಯಕ್ತಿಗಳ ವಿಚಾರವಲ್ಲ. ಇಡೀ ಮುಸ್ಲಿಮ್ ಸಮುದಾಯದ ಘನತೆಯ ವಿಷಯವಾಗಿದೆ. ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಇದನ್ನು ಕೇವಲ ರಾಜಕೀಯ ನಿರ್ಧಾರವೆಂದು ಸಮರ್ಥಿಸಲು ಸಾಧ್ಯವಿಲ್ಲ.

ಮುಸಲ್ಮಾನರಿಗೆ ಕಾಂಗ್ರೆಸ್ ಕೊಟ್ಟಷ್ಟು ರಕ್ಷಣೆ ಬೇರೆ ಯಾವುದೇ ಪಕ್ಷ ಕೊಟ್ಟಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.
ಇದು ಅತ್ಯಂತ ಖಂಡನೀಯವಾಗಿದೆ. ರಕ್ಷಣೆ ಈ ದೇಶದ ಸಂವಿಧಾನವು ಇಲ್ಲಿನ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಹಕ್ಕಾಗಿದೆ. ಅದು ಯಾವುದೇ ಪಕ್ಷ ಯಾವುದೇ ಸಮುದಾಯಕ್ಕೆ ನೀಡಿರುವ ಕೊಡುಗೆಯಲ್ಲ. ಅದನ್ನು ಒಂದು ಸರಕಾರ ನೀಡುವುದು ಅದರ ಕರ್ತವ್ಯವೇ ಹೊರತು, ಅದು ಉಪಕಾರ ಅಥವಾ ಸಾಧನೆಯಲ್ಲ.

ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ಈ ಬಗ್ಗೆ ಕೂಡಲೇ ಗಮನ ಹರಿಸಿ ಮುಸ್ಲಿಂ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಂಡು ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತದೆ ಎಂದು ಆಶಿಸುತ್ತೇವೆ. 2023ರ ಚುನಾವಣಾ ಸಂದರ್ಭದಲ್ಲಿ ಸಮುದಾಯಕ್ಕೆ ನೀಡಲಾದ ಎಲ್ಲ ಭರವಸೆಗಳನ್ನು ಈಡೇರಿಸಬೇಕು. ಸರಕಾರದಲ್ಲಿ, ಪಕ್ಷದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ ಹುದ್ದೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಸಮುದಾಯಕ್ಕೆ ಆಗಿರುವ ನೋವಿಗೆ ಕಾಂಗ್ರೆಸ್ ಪಕ್ಷ ಕೂಡಲೇ ಸ್ಪಂದಿಸಿ ಸೂಕ್ತ  ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುಮಾರು ಮೂವತ್ತು ಪ್ರಮುಖ ಪ್ರತಿನಿಧಿಗಳನ್ನೊಳಗೊಂಡ ಕರ್ನಾಟಕ ರಾಜ್ಯ ಮುಸ್ಲಿಮ್ ಸಂಘಟನೆಗಳ  ಒಕ್ಕೂಟ ಆಗ್ರಹಿಸಿದೆ.