June 13, 2024

Vokkuta News

kannada news portal

ಕೋರೋಣ ನಿಯಂತ್ರಣ ವಿಫಲತೆಯನ್ನು ಮತೀಯ ದ್ವೇಷಕ್ಕೆ ಪರಿವರ್ತಿಸಿದ ತೇಜಸ್ವಿ ಸೂರ್ಯ ಕೋಮು ಮನಸ್ಥಿತಿಗೆ ಖಂಡನೆ: ಕೆ.ಅಶ್ರಫ್.

ಮಂಗಳೂರು: ಕೋರೋಣ ಸೋಂಕು ಪ್ರಸರಣವನ್ನು ನೆರೆರಾಜ್ಯ ಕೇರಳದಂತೆ ವೈಜ್ಞಾನಿಕ ಪರಿಹಾರ ಕೈಗೊಂಡು ನಿಭಾಯಿಸಲು ಆಗದೆ, 2 ನೇ ಕೋರೋಣ ಅಲೆ ಬಗ್ಗೆ ಮುಂಜಾಗ್ರತೆ ವಹಿಸದೆ, ಆಕ್ಸಿಜನ್, ಹಾಸಿಗೆ, ಜೀವರಕ್ಷಕ ಔಷಧಗಳ ಪೂರೈಕೆ ಬಗ್ಗೆ ನಿಗಾ ವಹಿಸದೆ, ಸಂಭವನೀಯ ದುರಂತ, ವಿಪತ್ತುಗಳನ್ನು ಸಮರ್ಪಕವಾಗಿ ನಿಭಾಯಿಸಲಾಗದೆ, ಕೋರೋಣ ಸೋಂಕಿತ ರೋಗಿಗಳ ಆರೋಗ್ಯ ಜವಾಬ್ದಾರಿ ವಹಿಸದೆ, ತಮ್ಮ ಆಡಳಿತ ವೈಫಲ್ಯತೆಯಿಂದ ಬೃಹತ್ ನಗರ ಪಾಲಿಕೆ ಬೆಂಗಳೂರು ವ್ಯಾಪ್ತಿ ಮತ್ತು ರಾಜ್ಯಾದ್ಯಂತ ನೂರಾರು ಸಂಖ್ಯೆಯಲ್ಲಿ ಸಾವು ನೋವುಗಳಿಗೆ ನೇರ ಕಾರಣರಾದ, ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಳಿಸಿ, ಜನರಿಂದ ಛೀಮಾರಿ ಗೊಳಗಾದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮತ್ತು ಮೂಲ ಸೌಕರ್ಯ, ಔಷದ, ಆಕ್ಸಿಜನ್ ಅನ್ನು ಕೇಂದ್ರದಿಂದ ರಾಜ್ಯಕ್ಕೆ ಪೂರೈಸಿ ಕೊಳ್ಳಲು ಅಸಮರ್ಥರಾದ ರಾಜ್ಯದ ಸರ್ವ ಸಂಸದರು ಮತ್ತು ಅದರಲ್ಲೂ ಮೋದಿಯನ್ನು ಓಲೈಸಲೆಂದೇ ಸಂಸತ್ ನಲ್ಲಿ ಆಂಗ್ಲ ಭಾಷೆಯಲ್ಲಿ ಹಾಡಿ ಹೊಗಳಿ ಅಟ್ಟ ಕ್ಕೇರಿಸಿದ, ಕಳೆದ ಒಂದು ತಿಂಗಳಿನಿಂದೀಚೆಗೆ ಬೆಂಗಳೂರಿನಲ್ಲಿ ಕೋರೋಣದಿಂದ ಆಗುತ್ತಿರುವ ನೂರಾರು ಜನರ ಸಾವು ನೋವುಗಳ ದುರ್ಘಟನೆ ಗಳನ್ನು ಕಣ್ಣು ಹಾಯಿಸಿ ಕೂಡಾ ನೋಡದೆ ಇದ್ದ, ಅ ಭಾಗಕ್ಕೆ ತಪ್ಪಿಯೂ ಕೂಡಾ ಬರದೆ, ದೂರವೇ ಉಳಿದಿದ್ದ ಸಂಸದರಾದ ಸೂರ್ಯ ನಾರಾಯಣ ತೇಜಸ್ವಿ@ ತೇಜಸ್ವಿ ಸೂರ್ಯ, ಇದೀಗ ಬಿ.ಬಿ.ಎಂ.ಪಿ. ಕೋರೋಣ ವಾರ್ ರೂಮ್ ನಲ್ಲಿ
ಬಿ.ಬಿ.ಎಂ.ಪಿ. ಅಧಿಕಾರಿಗಳು ನಕಲಿ ರೋಗಿಗಳ ಹೆಸರು ನೊಂದಾಯಿಸಿ ಬೆಡ್ ಬ್ಲಾಕ್ ಗೊಳಿಸಿದ್ದಾರೆ ಎಂಬುದಾಗಿ ತನ್ನದೇ ಪಕ್ಷದ ಅಧೀನದಲ್ಲಿರುವ ಬಿ.ಬಿ.ಎಂ.ಪಿ. ಯಲ್ಲಿ ಬ್ರಷ್ಟಾಚಾರ ನಡೆದಿದೆ ಎಂದು ಬಹಿರಂಗವಾಗಿ ಪತ್ರಿಕಾ ಗೋಷ್ಠಿ ಕರೆದು, ಹೀರೋಯಿಸಂ ಪ್ರದರ್ಶಿಸುವ ಮೂಲಕ ಪ್ರಸ್ತುತ ತನ್ನ ಪಕ್ಷದ ಸರ್ಕಾರದ ವಿರುದ್ಧ ಜನಾಕ್ರೋಶ ಸೃಷ್ಟಿಯಾಗುವುದನ್ನು ತಡೆಯಲು ಪ್ರಯತ್ನಿಸಿ, ಈಗ ಬೆಡ್ ಬ್ಲಾಕ್ ಕೃತ್ಯದಲ್ಲಿ ದಾಖಲಾದ ಮುಸ್ಲಿಮ್ ವ್ಯಕ್ತಿಗಳ ಹೆಸರನ್ನು ವೈಭವೀಕರಿಸಿ, ಕೋವಿಡ್ ದುರಂತಕ್ಕೆ ಮುಸ್ಲಿಮರು ಕಾರಣ ಎಂಬ ರೀತಿಯಲ್ಲಿ ಹೇಳಿಕೆ ಕೊಟ್ಟು, ಮತೀಯ ಉದ್ವಿಗ್ನತೆಯನ್ನು ಸೃಷ್ಟಿಸಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುವ ತೇಜಸ್ವಿ ಸೂರ್ಯನ ವರ್ತನೆಗೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಖಂಡನೆ ವ್ಯಕ್ತಪಡಿಸುತ್ತದೆ.
ಬಿ.ಬಿ.ಎಂ.ಪಿ.ಯಲ್ಲಿ ನಡೆದ ಬೆಡ್ ಬ್ಲಾಕ್ ಕೃತ್ಯದ ಬಗ್ಗೆ ತನ್ನದೇ ಸರಕಾರದ ಅಡಿಯಲ್ಲಿರುವ ಪೊಲೀಸು ಇಲಾಖೆ ಮುಖಾಂತರ ಸೂಕ್ತ ಮತ್ತು ಸಮಗ್ರ ತನಿಖೆ ನಡೆಸಲಿ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲಿ, ಹಾಗೆಂದು ರೋಗಿಗಳ ನೋಂದಣಿ ಪಟ್ಟಿಯಲ್ಲಿ ಮುಸ್ಲಿಮ್ ಹೆಸರು ದಾಖಲಿದೆ ಎಂದು ಘಟನೆಯನ್ನು ಮತೀಯ ಉದ್ವಿಗ್ನತೆಗೆ ಪರಿವರ್ತಿಸಿದರೆ, ಈಗಾಗಲೇ ಆದ ಜೀವ ಹಾನಿಯೊಂದಿಗೆ, ಇತರ ಹಾನಿಗಳಾಗಬಹುದು. ಕರ್ನಾಟಕದ ಜನತೆ ಈಗಾಗಲೇ ನಿಮ್ಮ ಕೋಮು ದುಂಡಾ ವರ್ತನೆಯ ರಹಸ್ಯವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ನೀವು ಅರಿವು ಮಾಡಿಕೊಳ್ಳಿ. ಪ್ರಸ್ತುತ ನಾವು ಎದುರಿಸುತ್ತಿರುವ ಸಂಕಷ್ಟವನ್ನೂ, ದುರಂತವನ್ನೂ ನಿಯಂತ್ರಿಸಲು ಪ್ರಯತ್ನಿಸಿ, ಹೊರತಾಗಿ ತಿನ್ನುವ ಅನ್ನದಿಂದ ಹಿಡಿದು ಉಸಿರಾಡುವ ಗಾಳಿ, ವಾತಾವರಣದ ಉಷ್ಣತೆವರೆಗೆ ಎಲ್ಲವನ್ನೂ ಕೋಮು ಮನಸ್ಥಿತಿ ಯಿಂದ ನೋಡುವ ನಿಮ್ಮ ಬಾಲಿಶ ವರ್ತನೆಗೆ ಖಂಡನೆಯಿರಲಿ ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.