November 5, 2024

Vokkuta News

kannada news portal

ಮುನ್ನೂರು ಮನೆಕುಸಿತ ದುರಂತ,ಹರಿದು ಬಂದ ಸಂತಾಪ,ಗಣ್ಯರ ಭೇಟಿ,ಪರಿಹಾರಕ್ಕಾಗಿ ಆಗ್ರಹ,ವಿಪತ್ತು ನಿರ್ವಹಣೆಗೆ ಒತ್ತಡ.

ಮಂಗಳೂರು: ವಾಸ್ತವ್ಯ ಗೃಹದ ಮೇಲೆ ಪಕ್ಕದ ಅತಿ ಶಿಥಿಲವಾದ ಆವರಣ ಗೋಡೆ ಕುಸಿದ ಪರಿಣಾಮ ನಾಲ್ವರು ಮೃತಪಟ್ಟ ದುರಂತ ಘಟನೆ ಮುನ್ನೂರು ಗ್ರಾಮದ ಕುತ್ತಾರಿನ ಮದನಿ ನಗರ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ಮೃತರನ್ನು ಮದನಿ ನಗರದ ನಿವಾಸಿಗಳಾದ ಯಾಸೀರ್(45) ಮತ್ತವರ ಪತ್ನಿ ಮರಿಯಮ್ಮ(40) ಹಾಗೂ ಇಬ್ಬರು ಮಕ್ಕಳಾದ ರಿಯಾನಾ ಮತ್ತು ರಿಫಾನ ಸಾವನ್ನಪ್ಪಿದ್ದಾರೆ. ಅಬೂಬ್ಬಕರ್ ಎಂಬವರ ಮನೆಯ ಆವರಣ ಗೋಡೆಯ ಯಾಸಿರ್ ಎಂಬವರ ಮನೆಯ ಮೇಲೆ ಬಿದ್ದ ಪರಿಣಾಮ ಈ ದುರಂತ ಅವಘಡ ನಡೆದಿದೆ.

ಮುನ್ನೂರು ಗ್ರಾಮದ ಕುತ್ತಾರಿನ ಮದನಿ ನಗರದಲ್ಲಿ ಇಂದು ಮುಂಜಾನೆ ಒಂದೇ ಕುಟುಂಬದ ನಾಲ್ವರು ಗೋಡೆ ಕುಸಿದು ಸಾವನ್ನಪ್ಪಿದ ಘಟನೆ ಅರಿತು, ಸ್ಪೀಕರ್‌ ಯು.ಟಿ. ಖಾದರ್‌ ಹಾಗೂ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನ ನಡೆಸಿ ಪರಿಹಾರ ಕಾರ್ಯ ವೀಕ್ಷಿಸಿದರು.

ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಸ್ಪೀಕರ್‌ ಯು.ಟಿ. ಖಾದರ್‌, ಸರ್ಕಾರದಿಂದ ಹೆಚ್ಚಿನ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದ್ದಾರೆ. ಇಂಥಹ ದುರ್ಘಟನೆಗಳಲ್ಲಿ ಪರಿಹಾರ ನೀಡುವುದಕ್ಕೆ ಸರ್ಕಾರದ ಮಾನದಂಡ ಮತ್ತು ನಿಯಮಗಳಿವೆ. ಮನೆ ಕುಸಿತಗೊಂಡಿದೆ. ಅದಕ್ಕೂ ಸರ್ಕಾರದ ಪರಿಹಾರವಿದೆ. ಆದರೆ, ಈ ದುರಂತವನ್ನು ವಿಶೇಷವಾಗಿ ಪರಿಗಣಿಸಿ ಸರ್ಕಾರದ ಕಡೆಯಿಂದ ಹೆಚ್ಚಿನ ಪರಿಹಾರ ಹಂಚುವುದಕ್ಕೆ ಪ್ರಯತ್ನಿಸಲಾಗುವುದು. ಪರಿಹಾರ ಸೇರಿ ಎಲ್ಲ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿ ಮತ್ತು ತಃಶೀಲುದಾರರ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಜಿ ಸಂಸದ ನಳಿನ್ ಕುಮಾರ್, ಸಂತೋಷ್ ಕುಮಾರ್ ಬೋಲಿಯಾರ್, ರಾಮಚಂದ್ರ ಉಚ್ಚಿಲ ಸಿದ್ದೀಕ್ ತಲಪಾಡಿ ಮುಂತಾದವರು ಘಟನಾ ಸ್ಥಳಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಲಿ ಮೃತದೇಹಗಳನ್ನು ದೇರಳ ಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜುವಿನಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದ್ದು, ಸಂಜೆ ವೇಳೆಗೆ ಮದನಿ ನಗರ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ.

ಕೆ.ಅಶ್ರಫ್ ಸಂತಾಪ : ಮುನ್ನೂರು ನೈಸರ್ಗಿಕ ದುರಂತದಲ್ಲಿ ಸಂಭವಿಸಿದ ಮರಣಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರಾದ ಕೆ.ಅಶ್ರಫ್ ಮತ್ತು ಯುನಿವಫ್ ಕರ್ನಾಟಕ ಸಂಸ್ಥೆಯ ಮುಖ್ಯಸ್ಥ ರಫಿಉದ್ಧೀನ್ ಕುದ್ರೋಳಿ ಸಂತಾಪ ಸೂಚಿಸಿದ್ದಾರೆ.

ರಿಯಾಝ್ ಪರಂಗಿ ಪೇಟೆ ಸಂತಾಪ ಮತ್ತು ಆಗ್ರಹ:

ಜಿಲ್ಲಾಡಳಿತವು ಮುಂಗಾರು ಮಳೆಯ ಮುಂಜಾಗ್ರತಾ ಕ್ರಮದ ಭಾಗವಾಗಿ ಅಪಾಯದ ಸ್ಥಿತಿಯಲ್ಲಿರುವ ಮನೆಗಳನ್ನು ಒಕ್ಕಲೆಬ್ಬಿಸಿ ಅವರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. ಎರಡು ವರ್ಷಗಳ ಹಿಂದೆಯೂ ಇದೇ ಮನೆಯ ಮೇಲೆ ಕಂಪೌಂಡು ಕುಸಿದು ಬಿದ್ದು ಯಾವುದೇ ಪ್ರಾಣಪಾಯಗಳಾಗಿರಲಿಲ್ಲ ಆದರೆ ಈಗ ಅದೇ ಮನೆಯ ಮೇಲೆ ಮತ್ತೆ ಕಂಪೌಂಡು ಕುಸಿದು 4 ಮರಣ ಸಂಭವಿಸಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ. ಇದೇ ರೀತಿ ನಾಟೆಕಲ್ ಪರಿಸರದಲ್ಲೂ ಕಂಪೌಂಡ್ ಕುಸಿದು ಬಿದ್ದು ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ ಇಂತಹ ಹಲವಾರು ಘಟನೆಗಳು ಸಂಭವಿಸುತ್ತಿದ್ದು ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರವು ಪ್ರಕೃತಿ ವಿಕೋಪ ನಿರ್ವಹಣೆ ಸರಿಯಾಗಿ ನಿರ್ವಹಿಸದ ಕಾರಣ ಈ ರೀತಿಯ ಘಟನೆಗಳು ಸಂಭವಿಸುತ್ತಿದೆ.

ಇದೇ ರೀತಿ ಉಳ್ಳಾಲದ ಹಳೆ ಕೋಟೆಯಲ್ಲಿ ಬೃಹತ್ ಗಾತ್ರದ ಕಂಪೌಂಡ್ ಹಲವು ವರ್ಷಗಳಿಂದ ಅಪಾಯಕಾರಿ ಸ್ಥಿತಿಯಲ್ಲಿದ್ದರು ಸ್ಥಳೀಯ ಶಾಸಕರು ಭೇಟಿ ನೀಡಿದ್ದರೂ ಯಾವುದೇ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರಿರುವ ಘಟನೆಯು ಮಂಗಳೂರು ಕ್ಷೇತ್ರದಲ್ಲಿ ಇದೆ. ಪ್ರಕೃತಿ ವಿಕೋಪದಲ್ಲಿ ಜೀವ ಕಳೆದು ಹೋದ ನಂತರ ಸಾಂತ್ವನ, ಸಂತಾಪ ಸೂಚಿಸುವ ಬದಲು ಮುಂಜಾಗೃತ ಕ್ರಮದ ಭಾಗವಾಗಿ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ಈ ಬಗ್ಗೆ ಎಚ್ಚೆತ್ತುಕ್ಕೊಳ್ಳಬೇಕೆಂದು , ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ರವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.