March 10, 2025

Vokkuta News

kannada news portal

ದಿಗಂತ್ ನಾಪತ್ತೆ ಪ್ರಕರಣವನ್ನು ನಗದೀಕರಿಸಿ ಕೋಮು ಸಂಘರ್ಷಕ್ಕೆ ಯತ್ನ: ಭರತ್ ಶೆಟ್ಟಿ,ಪೂಂಜಾ ವಿರುದ್ಧ ಪ್ರಕರಣಕ್ಕೆ ಒತ್ತಾಯ.

ಮಂಗಳೂರು: ದಿಗಂತ್ ನಾಪತ್ತೆ ಪ್ರಕರಣದಲ್ಲಿ ಕೋಮು ಸಂಘರ್ಷಕ್ಕೆ ಯತ್ನಿಸಿದ ಶಾಸಕ ಭರತ್ ಶೆಟ್ಟಿ, ಹರೀಶ್ ಪೂಂಜಾ ಸಹಿತ ಸಂಘಪರಿವಾರದ ಪ್ರಮುಖರ ಮೇಲೆ ಸುಮೋಟೋ ಕೇಸ್ ದಾಖಲಿಸಲು ಆಗ್ರಹಿಸಿ ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯ ನಿಯೋಗದಿಂದ ಜಿಲ್ಲಾ ಎಸ್ಪಿಗೆ ಮನವಿ ಮಾಡಿದೆ.

ಪೊಲೀಸ್ ಇಲಾಖೆಯ ಶ್ರಮದ ಕಾರಣ ಯುವಕ ದಿಗಂತ್ ನನ್ನು ಸುರಕ್ಶಿತವಾಗಿ ಪತ್ತೆಯ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ ನಾಪತ್ತೆ ವಿಚಾರ ಬಹಿರಂಗಗೊಂಡ ತಕ್ಷಣ ಬಜರಂಗ ದಳ ಸಹಿತ ಸಂಘ ಪರಿವಾರದ ಸಂಘಟನೆಗಳು ಹಾಗೂ ಬಿಜೆಪಿಯ ಪ್ರಮುಖರು, ಪ್ರಕರಣಕ್ಕೆ ಕೋಮು ಬಣ್ಣ ಬಳಿದು ಎರಡು ಸಮುದಾಯಗಳ ನಡುವೆ ಸಂಘರ್ಷ ಹುಟ್ಟುಹಾಕುವ ಯತ್ನ ನಡೆಸಿದ್ದಾರೆ. ಪ್ರಕರಣದ ತನಿಖೆಗೆ ಅವಕಾಶ ನೀಡದೆ ಮತೀಯತೆ ಆಧಾರದಲ್ಲಿ ಪ್ರತಿಭಟನೆ, ಬಂದ್ ನಡೆಸಿ ಪೊಲೀಸ್ ಇಲಾಖೆಯನ್ನು ಒತ್ತಡಕ್ಕೆ ಸಿಲುಕಿಸಲಾಗಿದೆ. ಪೊಲೀಸ್ ಇಲಾಖೆಯನ್ನು ಕ್ರಿಮಿನಲ್ ಸಮುದಾಯದ ಪಕ್ಷಪಾತಿಗಳು ಎಂದು ಆರೋಪಿಸಲಾಗಿದೆ. ಬಿಜೆಪಿ ಶಾಸಕರಾದ ಭರತ್ ಶೆಟ್ಟಿ, ಹರೀಶ್ ಪೂಜಾ ಹಾಗೂ ಸಂಘ ಪರಿವಾರದ ಸ್ಥಳೀಯ ನಾಯಕರು ದ್ವೇಷ ಭಾಷಣ ಮಾಡಿದ್ದಾರೆ. ಇದು ನೆಲದ ಕಾನೂನು ಹಾಗೂ ಸಂವಿಧಾನದ ಜಾತ್ಯತೀತ ಆಶಯ, ನಿಯಮಗಳಿಗೆ ವಿರುದ್ಧವಾಗಿದೆ. ಕೋಮು ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿರುವ ಫರಂಗಿಪೇಟೆ, ಬಂಟ್ವಾಳ, ಮಂಗಳೂರಿನಲ್ಲಿ ಇಂತಹ ನಡೆಗಳು ದೊಡ್ಡ ಸಂಘರ್ಷಕ್ಕೆ ಕಾರಣವಾಗುವ ಸ್ಯಾದ್ಯತೆ ಇದೆ. ಹಾಗಾಗಿ ಪ್ರಚೋದನಾಕಾರಿ ಭಾಷಣ ಮಾಡಿದ ಶಾಸಕ ಭಾರತ ಶೆಟ್ಟಿ, ಹರೀಶ್ ಪೂಂಜಾ ಹಾಗೂ ಬಜರಂಗದಳದ ಭರತ್ ಕುಮ್ಡೇಲು ಮತ್ತಿತರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಣೆಯಿಂದ ಮೊಕ್ಕದ್ದಮೆ ಹೂಡಬೇಕು ಎಂದು ನಿಯೋಗವು ಮನವಿಯಲ್ಲಿ ಆಗ್ರಹಿಸಿದೆ.

ನಿಯೋಗದಲ್ಲಿ ವೇದಿಕೆಯ ಸಂಚಾಲಕ, ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ರಾಜ್ಯ ವಕ್ತಾರ ಎಮ್ ಜಿ ಹೆಗ್ಡೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ್ ಬಿ, ಆಮ್ ಆದ್ಮಿಯ ಎಸ್ ಎಲ್ ಪಿಂಟೊ, ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮಾಜಿ ಮೇಯರ್ ಕೆ ಅಶ್ರಫ್, ಕರ್ನಾಟಕ ಪ್ರಾಂತ ರೈತ ಸಂಘದ ಕೆ ಯಾದವ ಶೆಟ್ಟಿ, ದಲಿತ ಸಂಘರ್ಷ ಸಮಿತಿ ಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಎಐಟಿಯುಸಿ ಮುಂದಾಳು ಎಚ್ ವಿ ರಾವ್, ಕಾರ್ಮಿಕ ಮುಂದಾಳುಗಳಾದ ವಿ ಕುಕ್ಯಾನ್, ಸೀತಾರಾಮ ಬೇರಿಂಜೆ, ಡಿವೈಎಫ್ಐ ನ ಬಿ ಕೆ ಇಮ್ತಿಯಾಝ್, ಸಂತೋಷ್ ಬಜಾಲ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಶೆಟ್ಟಿ, ಪ್ರಮೀಳಾ ಕೆ, ಎಸ್ಎಫ್ಐ ನ ವಿನುಷ ರಮಣ, ಸಮುದಾಯ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು, ವಿವಿಧ ಸಂಘಟನೆಗಳ ಮುಂದಾಳುಗಳಾದ ಸರೋಜಿನಿ ಬಂಟ್ವಾಳ, ಕರುಣಾಕರ ಮಾರಿಪಳ್ಳ, ಸಮರ್ಥ್ ಭಟ್, ನೀತ್ ಶರಣ್, ರಾಜೇಶ್ ದೇವಾಡಿಗಾ ಮುಂತಾದವರು ಉಪಸ್ಥಿತರಿದ್ದರು