November 5, 2024

Vokkuta News

kannada news portal

ಮಕ್ಕಳಲ್ಲಿ ನಿಕಟ ಸಂಪರ್ಕವಿರಿಸಿ : ಉಳ್ಳಾಲ ವ್ಯಸನ ಮುಕ್ತ ಸಭೆಯಲ್ಲಿ ಪ್ರೊ. ಎ.ಎಂ.ಖಾನ್.

ಇಸ್ಲಾಮ್ ಮದ್ಯಪಾನವನ್ನು ನಿಷೇಧಿಸಿದೆ ಮತ್ತು ಜೂಜಾಟವು ಶೈತಾನನ ಕ್ರಿಯೆಯಾಗಿದೆ ಎಂದು ಕುರ್ ಆನ್ ಭೋದಿಸುತ್ತದೆ,ಒಂದು ಸಾವಿರದ ನಾಲ್ಕು ನೂರು ವರ್ಷದ ಹಿಂದೆ ಪ್ರವಾದಿ ಮೊಹಮ್ಮದ್ ಸ. ಅ. ರವರು ಮಾದಕ,ಅಮಲು ಹಾಗೂ ಮದ್ಯ ಪಾನವನ್ನು ನಿಷೇಧಿಸಿದ್ದಾರೆ. ಜೂಜಾಟ,ಮದ್ಯಪಾನ ನಿಮಗೆ ಕೆಡುಕು ತರಲಿದೆ ಎಂದು ಪ್ರತಿಪಾದಿಸಿದ್ದಾರೆ- ಇಬ್ರಾಹಿಮ್ ಮದನಿ

ಉಳ್ಳಾಲ: ಪೇಟೆ ನಾಗರಿಕ ಸಮಿತಿ ಉಳ್ಳಾಲ ಇದರ ಆಯೋಜನೆಯಲ್ಲಿ ಉಳ್ಳಾಲದಲ್ಲಿ ಇಂದು ಜರುಗಿದ ಮಾದಕ ವ್ಯಸನ ವಿರೋಧಿ ಅಭಿಯಾನ ಜಾಥಾ ಮತ್ತು ಜನ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರೊ. ಎ.ಎಂ.ಖಾನ್ ರವರು ಮಾತನಾಡಿ ಪೋಷಕರು ಎಳೆ ಮಕ್ಕಳೊಂದಿಗೆ ನಿಕಟ ಸಂಪರ್ಕದಿಂದ ಇರಲು ಸಭೆಯನ್ನು ಉದ್ದೇಶಿಸಿ ಕರೆ ನೀಡಿದರು.

ಪೇಟೆ ರಹ್ಮಾನಿಯಾ ಜುಮ್ಮಾ ಮಸೀದಿ ಮತ್ತು ಬುಸ್ತಾನುಲ್ ಉಲೂಮ್ ಯೂತ್ ಎಸೋಸಿಯೇಷನ್ ಉಳ್ಳಾಲ ಮತ್ತು ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಾದಕ ವ್ಯಸನ ವಿರೋಧಿ ಅಭಿಯಾನದ ಭಾಗವಾಗಿ ಇಂದು ಸಂಜೆ ಮೊಹಲ್ಲಾದ ಜನರು,ವಿಧ್ಯಾರ್ಥಿಗಳು ಪೇಟೆ ರಹ್ಮಾನಿಯಾ ಮಸೀದಿ ವಟಾರದಿಂದ ಜಾಗೃತಿ ಮೂಡಿಸುವಿಕೆಯ ಭಿತ್ತಿ ಪತ್ರ ಪ್ರದರ್ಶನದೊಂದಿಗೆ ಜಾಥಾ ಹೊರಟು ನಗರ ಸಭಾ ಮೈದಾನದವರೆಗೆ ಸಾಗಿ ಜನಜಾಗೃತಿ ಸಮಾವೇಶ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಉಳ್ಳಾಲ ಮಂಡಲ ಮಾಜಿ ಅಧ್ಯಕ್ಷರು,ನಿಕಟ ಪೂರ್ವ ಉಳ್ಳಾಲ ಸೈಯದ್ ಮದನಿ ದರ್ಗಾ ಮತ್ತು ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ರವರು ವಹಿಸಿದ್ದರು. ಮಸೀದಿ ಸಂಸ್ಥೆಯ ಕಾರ್ಯದರ್ಶಿ ಆದ ಮುಸ್ತಾಫಾ ಅಹ್ಮದ್ ಅತಿಥಿಗಳನ್ನು ಸ್ವಾಗತಿಸಿದರು.

ಆರಂಭದಲ್ಲಿ ಸಭೆಯನ್ನು ಅಬ್ದುಲ್ ನಾಸಿರ್ ಮೌಲ್ವಿ ಕಿರಾಅತ್ ಪಠಿಸುವ ಮೂಲಕ ಆರಂಭಿಸಿದರು. ಜನ ಜಾಗೃತಿ ಸಭೆಯ ಪ್ರಾಸ್ತಾವಿಕ ಭಾಷಣ ಮಾಡಿದ ರಹ್ಮಾನಿಯ ಮಸೀದಿಯ ಖತೀಬ್ ರಾದ ಇಬ್ರಾಹಿಮ್ ಮದನಿಯವರು ಮಾತನಾಡಿ, ಯುವಕರ ಪ್ರೋತ್ಸಾಹ ದಿಂದ ಜರುಗುವ ವ್ಯಸನ ಮುಕ್ತ ಈ ಜಾಗೃತಿ ಕಾರ್ಯಕ್ರಮವು ಒಂದು ಉತ್ತಮ,ಶಾಂತಿಯುತ , ಆರೋಗ್ಯ ಯುಕ್ತವಾದ ಒಂದು ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗಲಿದೆ, ಈ ಪ್ರಯತ್ನಕ್ಕೆ ಪೇಟೆ ನಾಗರಿಕ ಸಮಿತಿಯನ್ನು ಶ್ಲಾಘಿಸಿದರು.

ವಿದ್ಯಾಭ್ಯಾಸವು ಅತ್ಯಂತ ಪ್ರಗತಿ ಹೊಂದಿದ ದ.ಕ.ಜಿಲ್ಲೆಯಲ್ಲಿ ಜನರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಈ ಕಾರ್ಯಕ್ರಮದ ಸಂಘಟಕರು ಪ್ರಯತ್ನಿಸಿದ್ದಾರೆ. ಆಧುನಿಕ ಪುರೋಗಮನ ಹೊಂದಿದ ಅದೆಷ್ಟೋ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಹರಡಿರುವ ಈ ಮಾದಕ ವ್ಯಸನದ ಪಿಡುಗು ಒಂದು ರಾಷ್ಟ್ರೀಯ ಸಮಸ್ಯೆಯಾಗಿ ಭಾಧಿಸಿದೆ. ಪೇಟೆ ನಾಗರಿಕ ಸಮಿತಿ ಉಳ್ಳಾಲ ಆಯೋಜಿಸಿದ ಈ ಅಭಿಯಾನಕ್ಕೆ ಯುವಕರ ಸಹಕಾರದ ಹೆಚ್ಚಿನ ಅಗತ್ಯ ಇದೆ,ಕಾರಣ ಯುವಕರೇ ಈ ವ್ಯಸನದ ಸಂತ್ರಸ್ತ ರಾಗಿದ್ದಾರೆ.

ಒಂದು ಸಾವಿರದ ನಾಲ್ಕು ನೂರು ವರ್ಷದ ಹಿಂದೆ ಪ್ರವಾದಿ ಮೊಹಮ್ಮದ್ ಸ. ಅ. ರವರು ಮಾದಕ,ಅಮಲು ಹಾಗೂ ಮದ್ಯ ಪಾನವನ್ನು ನಿಷೇಧಿಸಿದ್ದಾರೆ. ಜೂಜಾಟ,ಮದ್ಯಪಾನ ನಿಮಗೆ ಕೆಡುಕು ತರಲಿದೆ ಎಂದು ಪ್ರತಿಪಾದಿಸಿದ್ದಾರೆ. ಜನರು ಮದ್ಯ ವ್ಯಸನಿಗಳಾಗಿ ಪ್ರಾರ್ಥನೆಗೆ ಮಸೀದಿಗೆ ಆಗಮಿಸುವುದನ್ನು ಅವರು ತಡೆದರು. ಇಸ್ಲಾಮ್ ಮದ್ಯಪಾನವನ್ನು ನಿಷೇಧಿಸಿದೆ ಮತ್ತು ಜೂಜಾಟವು ಶೈತಾನನ ಕ್ರಿಯೆಯಾಗಿದೆ ಎಂದು ಕುರ್ ಆನ್ ಭೋದಿಸುತ್ತದೆ ಎಂದರು. ಮದ್ಯಪಾನ ಪರಸ್ಪರ ಜನರಲ್ಲಿ,ಕುಟುಂಬದಲ್ಲಿ ಸಮಾಜದಲ್ಲಿ ದ್ವೇಷ ಬಿಕ್ಕಟ್ಟು ಸೃಷ್ಟಿಸುತ್ತದೆ. ಇದು ದೇಶವನ್ನೇ ದುರ್ಗತಿಗೆ ತರಬಹುದು ಎಂದರು. ಪ್ರವಾದಿ ಜನ್ಮದಿನದ ಈ ಸಂದರ್ಭದ ಸಂದೇಶ ವ್ಯಸನ ಮುಕ್ತ ಸಮಾಜ ನಿರ್ಮಾಣ ಎಂದು ಆಗಬೇಕು ಮತ್ತು ಈ ಪಿಡುಗುವಿನ ತೊಲಗಿಸುವಿಕೆ ಒಂದೇ ಪ್ರಯತ್ನದಿಂದ ಸಾಧ್ಯವಿಲ್ಲವಾದರೂ ಸುದೀರ್ಘ ಶ್ರಮ ಮತ್ತು ಅವಿರತ ಪ್ರಯತ್ನದಿಂದ ಸಾಧ್ಯವಾಗ ಬಹುದು, ಸಭ್ಯ ಸಜ್ಜನಿಕೆ ವ್ಯಕ್ತಿಗಳ ಒಡನಾಟದಿಂದ ಉತ್ತಮ ಚಾರಿತ್ರ್ಯ ರೂಪಿಸುವಿಕೆ ಸಾದ್ಯ ಎಂದರು.

ಪ್ರೊ. ಎ.ಎಂ.ಖಾನ್ ಸಭೆಯನ್ನು ಉದ್ದೇಶಿಸಿ ಜಾಗೃತಿ ಅಭಿಯಾನ ನಿರಂತರ ನಡೆಯಬೇಕಿದೆ, ಇತ್ತೀಚೆಗೆ ಶಾಲೆ,ಕಾಲೇಜು ಸಂಸ್ಥೆಗಳಲ್ಲಿ ನಡೆಯುತ್ತಿರುವ ವರ್ಕ್ ಶಾಪ್ ಅರಿವು ಕಾರ್ಯಕ್ರಮದ ಮುಂದುವರಿಕೆ ಭಾಗವಾಗಿ ಸಮಾಜದಲ್ಲಿ ಸಾಮೂಹಿಕವಾಗಿ ನಡೆಯುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಎಂದರು. ಆಯೋಜಕರಿಗೆ ಧನ್ಯವಾದವನ್ನು ಸಲ್ಲಿಸಿದ ಅವರು ಸೆಪ್ಟೆಂಬರ್ ತಿಂಗಳಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಮಹತ್ವ ಇದೆ ಮತ್ತು ಈ ತಿಂಗಳಲ್ಲಿ ಇನ್ನೂ ಅಧಿಕ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯಬೇಕಿದೆ ಎಂದರು.

ಒಂದು ಸಮಾಜದಲ್ಲಿ ಮಾದಕ ವ್ಯಸನವನ್ನು ಹೇಗೆ ನಿಲ್ಲಿಸಬಹುದು ಎಂಬುದನ್ನು ಅರಿಯಬೇಕಿದೆ. ವ್ಯಸನದ ಪರಿಣಾಮ ಅದರಿಂದ ಪರಿಸರದ ಜನತೆಗೆ ತಟ್ಟುವ ಪ್ರಭಾವವನ್ನೂ ಅರಿಯಬೇಕಿದೆ. ಮೋಹಲ್ಲಾದ ಲ್ಲಿರುವ ವಿದ್ಯಾರ್ಥಿ ವಸತಿಗೃಹ, ಕ್ಲಿನಿಕ್ ಗಳಲ್ಲಿ ಜಾಗೃತಿ ಸಮಾಲೋಚನೆ ಸಭೆ, ಒಂದು ಯಾ ಎರಡು ಗಂಟೆಯ ಪ್ರೆಸೆಂಟೇಷನ್ ಕಾರ್ಯಾಗಾರ, ಸಂಭಾವ್ಯ ವ್ಯಸನ ಗ್ರಸ್ತರ ನೆರೆ ಮನೆ ಪರಿಸರದ ಮೇಲೆ ನಿಗಾ ಭೇಟಿ, ಮನೆಯಲ್ಲಿ ಮಕ್ಕಳ ಚಲನ ವಲನದ ಬಗ್ಗೆ ನಿಗಾ ಮತ್ತು ಮಕ್ಕಳಲ್ಲಿ ನಿಕಟ ಸಂಪರ್ಕ ಸಂಭಾಷಣೆ, ವ್ಯಸನಿಗಳ ಪುನರ್ವಸತಿಗೆ ಬೆಂಬಲ ನೀಡುವುದು. ಮೊಹಲ್ಲಾ ತಂಡ ವಿಧ್ಯಾರ್ಥಿಗಳ,ನೌಕರರ,ಜನರ ಚಲನ ವಲನಗಳ ಬಗ್ಗೆ ನಿಗಾ ಇಡುವಿಕೆ, ಪಕ್ಕದ ಮೊಹಲ್ಲಾ ತಂಡದೊಂದಿಗೆ ಮೊಬೈಲ್ ಗ್ರೂಪ್ ರಚಿಸಿ ಸಂಭಾವ್ಯ ವ್ಯಸನ ಗ್ರಸ್ತರ ಬಗ್ಗೆ ಮಾಹಿತಿ ಸಂಗ್ರಹ, ಸ್ಟಿಕರ್,ಬಿತ್ತಿ ಪತ್ರ ಪ್ರದರ್ಶನ, ಕಮ್ಯುನಿಟಿ ಪೋಲೀಸಿಂಗ್ ಇತ್ಯಾದಿ ಕ್ರಮದ ಮೂಲಕ ವ್ಯಸನವನ್ನು ತಹಬದಿಗೆ ತರಬಹುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಸಂಪನ್ಮೂಲ ವ್ಯಕ್ತಿ ಕಿಶೋರ್ ಅತ್ತಾವರ ಮಾತನಾಡಿ ಈ ಪಿಡುಗು ನಿಯಂತ್ರಣಕ್ಕೆ ಸಮಾಜ ವಿಜ್ಞಾನ ಸಂಶೋಧನೆ ಮಾಡಿ ವ್ಯಸನ ಮುಕ್ತತೆ ಕಾರ್ಯಕ್ಕೆ ವಿದ್ಯಾರ್ಥಿ ತಂಡಗಳನ್ನು ರಚಿಸಿದ್ದೇವೆ ಎಂದರು.

ವ್ಯಸನ ಏಕೆ ಮತ್ತು ಹೇಗೆ ಆಗುತ್ತದೆ ಎಂದರೆ, ವ್ಯಸನ ಗ್ರಸ್ತ ವ್ಯಕ್ತಿಯು ತನ್ನ ಸ್ವಾಭಾವಿಕ ಸ್ಥಿತಿಯಿಂದ ಕನಸು ಸ್ಥಿತಿಗೆ ಹೋಗಿ , ಸಾಮಾನ್ಯ ಸ್ಥಿತಿಯಿಂದ ಭಿನ್ನ ಸ್ಥಾನಕ್ಕೆ ಪಲ್ಲಟ ಗೊಳ್ಳುತ್ತಾನೆ ಎಂದರು. ಈ ಪ್ರಕ್ರಿಯೆ ಸಿಗರೇಟು, ಅಮಲು ಪದಾರ್ಥ ಅಥವಾ ಮದ್ಯ ಸೇವನೆ ಯಿಂದ ಆಗುತ್ತದೆ. ಈ ವ್ಯಸನದ ಸಂಸ್ಯೆಯ ಮೂಲ, ಇಂದಿನ ಪೈಪೋಟಿ ವ್ಯವಸ್ಥೆಯ ಕಾರಣ ದಿಂದಾಗಿದೆ. ಸರ್ವ ರಂಗದಲ್ಲಿ ಇಂದು ಪೈಪೋಟಿ ಇದ್ದಂತೆ,ಶಿಕ್ಷಣ ರಂಗದಲ್ಲಿ ಸಂಸ್ಥೆಗಳು ಪ್ರತಿಷ್ಠೆ ಮತ್ತು ಫಲಿತಾಂಶಕ್ಕಾಗಿ ಪೈಪೋಟಿ ನಡೆಸುತ್ತಿವೆ. ಈ ಸಾಧನೆಗಾಗಿ ಅಧ್ಯಾಪಕರು ತಮ್ಮ ಕಲಿಕೆಯ ಒತ್ತಡವನ್ನು ವಿಧ್ಯಾರ್ಥಿಗಳ ಮೇಲೆ ಹಾಕಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳು ಗರಿಷ್ಠ ಪಲಿತಾಂಶ ಸಾಧನೆಗಾಗಿ ಇನ್ನಿಲ್ಲದ ಒತ್ತಡವನ್ನು ಹಾಕುತ್ತಾರೆ. ವಿದ್ಯಾರ್ಥಿಗಳ ನೈಜ ಸಾಮರ್ಥ್ಯದ ಅರಿವು ಹೊಂದಲು ಅಧ್ಯಾಪಕರು ಮತ್ತು ಪೋಷಕರು ವಿಫಲ ಹೊಂದಿದ್ದಾರೆ. ಇಂತಹ ಒತ್ತಡದಿಂದ ವಿಧ್ಯಾರ್ಥಿಗಳು ಹೊರಬರಲು ಏಕಾಂತತೆ ಬಯಸುತ್ತಾರೆ ಮತ್ತು ಸಹಜವಾಗಿಯೇ ನಶೆ ವ್ಯವಸ್ಥೆಗೆ ಜಾರುತ್ತಾರೆ. ಈ ಜಾರುವಿಕೆ ಅವರನ್ನು ನಿರಂತರ ಮಾದಕತೆಗೆ ತಳ್ಳುತ್ತದೆ. ಆದುದರಿಂದ ವ್ಯಸನ ಗ್ರಸ್ತರನ್ನು ವಿವಿಧ ರೀತಿಯ ಪುನರ್ವಸತಿ ಕಾರ್ಯಕ್ರಮ ಯೋಜನೆ ರೂಪಿಸಿ ನಿವಾರಿಸಬೇಕಿದೆ.

ಸಭೆಯನ್ನು ಉದ್ದೇಶಿಸಿ ಕೌನ್ಸಿಲರ್ ಮೊಹಮ್ಮದ್ ಮುಕ್ಕಛೇರಿ ಮಾತನಾಡಿದರು ಮತ್ತು ವ್ಯಸನತೆ ಅಧಿಕವಾಗಳು ಹಲವು ಪರೋಕ್ಷ ಕಾರಣಗಳನ್ನು ವಿವರಿಸಿ ಸಮಾಜ ಒಟ್ಟಾಗಿ ನಿಂತು ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಾಜಿ ರಶೀದ್ ರವರು ಮಾತನಾಡಿ ಈ ಅಭಿಯಾನ ಜನರಿಗೆ ತಲುಪಿದೆ, ಮುಂದಿನ ಹಂತದಲ್ಲಿ ಸಂಘಟಕರು ಇತರ ಮೊಹಲ್ಲಾದ ಸಂಸ್ಥೆಗಳನ್ನು ಸೇರಿಸಿ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಸಬೇಕಿದೆ ಮತ್ತು ಆ ಮೂಲಕ ಅಭಿಯಾನವನ್ನು ಯಶಸ್ವಿ ಗೊಳಿಸಬೇಕಿದೆ. ಒಂದು ಕಾಲದಲ್ಲಿ ಉಳ್ಳಾಲದಲ್ಲಿ ಶರಾಬು ಸೇವನೆ ಮಾಡಿ ರಸ್ತೆಯ ಉದ್ದಕೆ ಬೀಳುತ್ತಾ ಇದ್ದ ಉಲ್ಲಾಲವನ್ನು ಇಂದು ಇಂತಹ ಸಮಾವೇಶ ಮತ್ತು ಜಾಗೃತಿ ಸಭೆ ಇಲ್ಲವಾಗಿಸಿದೆ. ಒಂದು ಕಾಲದಲ್ಲಿ ವರದಕ್ಷಿಣೆ ಪಿಡುಗು ನಿರಂತರವಾಗಿ ಅಸ್ತಿತ್ವದಲ್ಲಿ ಇದ್ದ ಉಳ್ಳಾಲ ಇಂದು ವರದಕ್ಷಿಣೆ ಮುಕ್ತ ಸಮಾಜವಾಗಿ ಪರಿವರ್ತನೆ ಆಗಲು ಇಂತಹ ಅಭಿಯಾನಾವೇ ಕಾರಣ ಆಗಿದೆ ಎಂದರು. ಮಾದಕ ವ್ಯಸನ ನಿಯಂತ್ರಣಕ್ಕೆ ಬರಲು ಪೇಟೆ ನಾಗರಿಕ ಸಮಿತಿ ಉಳ್ಳಾಲ ಇಂತಹ ಸಂಘಟನೆಗಳು ಮುಂದೆಯೂ ಸಹಕರಿಸಬೇಕು ಎಂದರು.

ಜನ ಜಾಗೃತಿ ಸಮಾವೇಶ ಆಯೋಜನೆಯಲ್ಲಿ ಬಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಶನ್ , ಬಿ. ಎಫ್.ಸಿ ಬಸ್ತಿಪಡ್ಪು , ಯುನೈಟೆಡ್ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ , ಬ್ಲಾಕ್ ಅಂಡ್ ವೈಟ್ ಕ್ಲಬ್ ಉಳ್ಳಾಲ, ಸ್ಟಾರ್ ಇಲೆವೆನ್ ಕೊಟ್ಟಾರ, ಫ್ರೆಂಡ್ಸ್ ಬಸ್ತಿ ಪಡ್ಪು ಕಲ್ಚರಲ್ ಎಸೋಸಿಯೇಷನ್ ಉಳ್ಳಾಲ, ನಾಡ ದೋಣಿ ಒಕ್ಕೂಟ ಉಳ್ಳಾಲ ಮತ್ತು ಇತರ ಸಂಘಟನೆಗಳು ಭಾಗಿಯಾಗಿದ್ದವು.

ಸಭೆಯಲ್ಲಿ ಮಸೀದಿಯ ಮಾಜಿ ಇಮಾಮ್ ಅಬ್ದುಲ್ ಲತೀಫ್ ಮದನಿ ಭಾಗವಹಿಸಿದ್ದರು. ರಿಯಾಝ್ ಮುಕ್ಕ ಚ್ಚೇರಿರವರು ಕಾರ್ಯಕ್ರಮ ನಿರೂಪಿಸಿದರು.