December 21, 2024

Vokkuta News

kannada news portal

ಮಣಿಪುರದಲ್ಲಿ ಘೋರ ಮಾನವ ಹಕ್ಕು ಉಲ್ಲಂಘನೆ: ಪಿಯುಸಿಎಲ್ ಸಂವಾದ ಕಾರ್ಯಕ್ರಮದಲ್ಲಿ ಹಕ್ಕು ಕಾರ್ಯಕರ್ತೆ ಡಾ.ದು.ಸರಸ್ವತಿ.

ಮಂಗಳೂರು : ಡಿ 20: ಮಣಿಪುರದ ಕುಕಿಗಳು ಮತ್ತು ಮೈತೇಯಿ ಸಮುದಾಯಗಳನ್ನು ಒಡೆದು ಬೇರ್ಪಡಿಸಿ, ಇದೀಗ ಸಂಧಾನದಕ್ಕೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿರುವುದಕ್ಕೆ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರಕಾರವೇ ಹೂಣೆ ಎಂದು ಸಾಮಾಜಿಕ ಮತ್ತು ಮಾನವಹಕ್ಕು, ಮಹಿಳಾವಾದಿ ಕಾರ್ಯಕರ್ತೆ ಡಾ. ದು.ಸರಸ್ವತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಿಯುಸಿಎಲ್‌ ಕರ್ನಾಟಕ ಘಟಕದಿಂದ ಜಾಗತಿಕ ಮಾನವ ಹಕ್ಕು ದಿನಾಚರಣೆ ಪ್ರಯುಕ್ತ, ‘ ಪ್ರಸಕ್ತ ಭಾರತದಲ್ಲಿ ಮಾನವ ಹಕ್ಕುಗಳ ಕಾಳಜಿ’ ಎಂಬ ವಿಷಯದಲ್ಲಿ ಶುಕ್ರವಾರ ನಗರದ ರೋಶನಿ ನಿಲಯ ಸಭಾಂಗಣದಲ್ಲಿ ಆಯೋಜಿಸಲಾದ ವಿಚಾರಗೋಷ್ಠಿಯಲ್ಲಿ ‘ಮಾನವ ಹಕ್ಕು ಗಳಿಗೆ ಸವಾಲಾಗಿರುವ ಮಣಿಪುರದ ಪ್ರಸಕ್ತ ಪರಿಸ್ಥಿತಿ’ ಎಂಬ ವಿಷಯ ಮಂಡನೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಮಣಿಪುರದಲ್ಲಿ ಸಂಭವಿಸಿದ ಸಂಘರ್ಷದ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ ನಿಯೋಗದ ಭಾಗವಾಗಿರುವ ಅಲ್ಲಿನ ನಿರಾಶ್ರಿತ ಶಿಬಿರ ಸೇರಿದಂತೆ ಈಗಿನ ಸ್ಥಿತಿಗತಿಯ ಬಗ್ಗೆ ಅರಿತುಕೊಂಡಿರುವ ತಾನು, ಅಗಾದ ಮಟ್ಟಿನ ಖನಿಜ ಸಂಪತ್ತಿನ ಬೆಟ್ಟಗುಡ್ಡ ಕಣಿವೆ ಪ್ರದೇಶವಾದ ಮಣಿಪುರದಲ್ಲಿ ಕೈಗಾರಿಕೋದ್ಯಮಿಗಳ ಹಿತಾಸಕ್ತಿಗಾಗಿ ಅಲ್ಲಿನ ‘ಭೂಮಿಯನ್ನು ನಿಖರ ಗಣಿ ತರಹ ಬಳಸುವ ನಿಟ್ಟಿನಲ್ಲಿ ಎರಡು ಸಮುದಾಯಗಳನ್ನು ಬೇರ್ಪಡಿಸುವ ಕಾರ್ಯ ಸ್ವತಹ ಅಲ್ಲಿನ ಆಳುವ ವರ್ಗದಿಂದಲೇ ನಡೆದಿರುವುದು ನೈಜ ಅಂಶ ಎಂದರು.

ಇದಕ್ಕಾಗಿ ಅಲ್ಲಿ ಎರಡು ಸಮುದಾಯಗಳ ನಡುವೆ ಪರಸ್ಪರ ಅಪನಂಬಿಕೆಗಳನ್ನು ಸೃಷ್ಟಿಸಿ ವಿಭಜಿಸುವ ಕಾರ್ಯ ನಡೆಸಲಾಗಿ ದೆ. ಹಿಂದಿನಿಂದಲೂ ಅಲ್ಲಿನ ಬುಡಕಟ್ಟು ಸಮುದಾಯಗಳ ನಡುವೆ ಸಂಘರ್ಷ ಸಾಮಾನ್ಯವಾಗಿದ್ದರೂ, ಸಂಧಾನ ಪ್ರಕ್ರಿಯೆ ಮೂಲಕ ಅವುಗಳು ಬಗೆಹರಿಯುತ್ತಿತ್ತು. ಆದರೆ ಈ ಬಾರಿ ಅಲ್ಲಿನ ಕುಕಿ ಜನಾಂಗವನ್ನು ಅವರು ನುಸುಳುಕೋರರು, ಆಫೀಮು ಬೆಳೆದು ಯುವ ಸಮುದಾಯವನ್ನು ನಾಶ ಮಾಡುತ್ತಿರುವ ಜತೆಗೆ ಅರಣ್ಯವನ್ನು ಒತ್ತುವರಿ ಮಾಡಿ ಕೊಂಡಿದ್ದಾರೆಂಬ ಆರೋಪ ಹೊರಿಸಲಾಗಿದೆ. ಇದನ್ನು ಮೈತೇಯಿ ಸಮುದಾಯ ನಂಬುವ ನಿಟ್ಟಿನಲ್ಲಿ ಅವರಲ್ಲಿ ದ್ವೇಷ ಭಾವನೆಯನ್ನು ತುಂಬಲಾಗಿದೆ. ಬರ್ಮಾದಿಂದ ಲಕ್ಷಾಂತರ ಸಂಖ್ಯೆಯಲ್ಲಿ ನುಸುಳುಕೋರರು ಅಲ್ಲಿಗೆ ಬಂದು ಅರಣ್ಯವನ್ನು ಒತ್ತುವರಿ ಗೂಳಿಸಿದ್ದಾರೆ. 400 ಹಳ್ಳಿಗಳು ಜಾಸ್ತಿಯಾಗಿದೆ ಎಂಬಿತ್ಯಾದಿಯಾಗಿ ಸ್ವತಃ ಅಲ್ಲಿನ ಮುಖ್ಯಮಂತ್ರಿಯವರೇ ಮಾಡುತ್ತಿ ರುವ ಆರೋಪದಲ್ಲಿ ಯಾವುದೇ ರೀತಿಯ ಸತ್ಯಾಂಶ ಕಂಡು ಬರುವುದಿಲ್ಲ.

ಅಲ್ಲಿನ ಇತಿಹಾಸ ತಜ್ಞರು, ಸಾಂಸ್ಕೃತಿಕ ಹಿನ್ನೆಲೆ ಬಲ್ಲ ಮೈತೇಯಿಯವರನ್ನು ಮಾತನಾಡಿಸಿದಾಗ ಗರಿಷ್ಟ 10,000 ಮಂದಿ ಮ್ಯಾನ್ಮಾರ್ ಬಿಕ್ಕಟ್ಟಿನ ಸಂದರ್ಭ ಪ್ರಾಣ ಉಳಿಸಿಕೊಳ್ಳಲು ಬಂದಿರುವುದನ್ನು ಒಪ್ಪುತ್ತಾರೆ ಎಂದು ಅವರು ವಿವರಿಸಿದರು.

ಕಣಿವೆಯಂತಿರುವ ಗುಡ್ಡ ಕಾಡಿನಲ್ಲಿ ಸಣ್ಣ ಕೃಷಿ ಮಾಡುವುದೇ ಕಷ್ಟ ಸಾಧ್ಯವಾಗಿರುವಾಗ ಸಾವಿರಾರು ಎಕರೆ ಒತ್ತುವರಿ ಮಾಡಲು ಸಾಧ್ಯವೇ ಇಲ್ಲ. ಅದಕ್ಕಿಂತಲೂ ಮುಖ್ಯವಾಗಿ ಅಲ್ಲಿರುವ ವಾಸಯೋಗ್ಯ ಪ್ರದೇಶವೇ ಕಡಿಮೆ. ಆರ್ಥಿಕವಾಗಿ ಕಂಗೆಟ್ಟು ಹೋಗಿರುವ ಜನರನ್ನು ಅಲ್ಲಿ ಅಧಿಕಾರದಲ್ಲಿರುವ ಶಕ್ತಿವಂತರೇ ಅಫೀಮು ಬೆಳೆಗೆ ಪ್ರೇರೇಪಿಸಿರುವುದನ್ನು ಇಲ್ಲವೆನ್ನಲಾಗದು. ಇಂತಹ ಜಾಲವನ್ನು ಅಲ್ಲಿನ ಐಪಿಎಸ್ ಅಧಿಕಾರಿ ಬೃಂದಾ ಅವರೇ ಹೊರಗೆಳೆದು ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇವೆಲ್ಲದರ ನಡುವೆ ಅಲ್ಲಿ ಆರಂಭ ದಲ್ಲೇ ಸಂಧಾನದ ಮೂಲಕ ಸಮುದಾಯಗಳ ನಡುವಿನ ವೈರುಧ್ಯವನ್ನು ಬಗೆಹರಿಸುವಲ್ಲಿ ಅಲ್ಲಿನ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ವೈಫಲ್ಯವಾಗಿರುವುದರಿಂದ ಮಣಿಪುರ ಹೊತ್ತಿ ಉರಿಯಬೇಕಾಯಿತು. ಇದೀಗ ನಿರಾಶ್ರಿತ ತಾಣಗಳಲ್ಲಿರುವವರ ಬದುಕು ಎಲ್ಲ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಗೆ ಜ್ವಲಂತ ಸಾಕ್ಷಿಯಾಗಿದೆ ಎಂದವರು ಹೇಳಿದರು.
ಅಲ್ಲಿನ ವಿಭಿನ್ನ ಸಂಸ್ಕೃತಿ, ಆಚರಣೆಯ ಸಮದಾಯಗಳನ್ನು ಒಡೆದಿರುವ ಸರಕಾರ ಬಗ್ಗೆ ನೋವಿದೆ. ಕಣ್ಣಿಗೆ ಕಾಣಿಸುವ ತಾರತಮ್ಯ, ಅಸಮಾನತೆಯ ಮೂಲಕ ಅಲ್ಲಿನ ಜನರನ್ನು

ದೇಶದ್ರೋಹಿಗಳನ್ನಾಗಿಸಿರುವ ಸರಕಾರಗಳತ್ತ ಬೆಟ್ಟು ಮಾಡುವ ಜತೆಗೆ ನಮ್ಮ ವೈಫಲ್ಯದ ಬಗ್ಗೆಯೂ ಬೆರಳು ತೋರಿಸಬೇಕಾಗಿದೆ. ಗಡಿ, ರಾಜ್ಯಗಳನ್ನು ಮೀರಿ ದೇಶವಾಗಿ ಇರಲು ಬೇಕಾಗಿರುವ ಆಧಾರ ಬಂಧುತ್ವ ಈ ಬಂಧುತ್ವವನ್ನು ಬೆಳೆಸುವ ಜವಾಬ್ದಾರಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ವಹಿಸಿಕೊಂಡು ನಿರಾಶ್ರಿತರ ಶಿಬಿರಗಳಲ್ಲಿ ಇರುವವರ ಮಾನವ ಹಕ್ಕುಗಳನ್ನು ರಕ್ಷಿಸುವತ್ತ ಗಮನ ಹರಿಸಬೇಕಾಗಿ ದೆ. ಅವರ ನೋವನ್ನು ಸಮಚಿತ್ತದಿಂದ ಆಲಿಸುವ ಕಿವಿಗಳು ಬೇಕಾಗಿದೆ. ಪ್ರತಿರೋಧವಿಲ್ಲದೆ, ಪ್ರಶ್ನೆ ಮಾಡದೆ, ವಾಗ್ವಾದ ಇಲ್ಲದೆ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಹಾಗಾಗಿ ಬಾಂಧವ್ಯವನ್ನು ಬಂಧುತ್ವದ ಆಧಾರದಲ್ಲಿ ಮಣಿಪುರದಲ್ಲಿ ನೆಲೆಸುವ ನಿಟ್ಟಿನಲ್ಲಿ ಪಿಯುಸಿಎಲ್ ಕೂಡಾ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ದು.ಸರಸ್ವತಿ ಹೇಳಿದರು.

ಮಣಿಪುರದಲ್ಲಿ ಆಸ್ಪತ್ರೆ,ಶಾಲೆ, ಆಶ್ರಯ,ಮಾತ್ರವಲ್ಲದೆ ಪೌಷ್ಟಿಕ ಆಹಾರದಿಂದಲೂ ವಂಚಿತವಾಗಿರುವವರು ಒಂದೆಡೆಯಾದರೆ, ಶಾಲೆ ಹಾಗೂ ಕಾಲೇಜುಗಳಲ್ಲಿ ಇರಬೇಕಾಗಿದ್ದ ಯುವಕರು ಬಂದೂಕು ಹೆಗಲೇರಿಸಿ ಕೊಂಡು ತಿರುಗುತ್ತಿದ್ದಾರೆ. ಮತ್ತೊಂದೆಡೆ ಮಹಿಳೆಯರು ರಾತ್ರಿ ಹೊತ್ತು ಗಸ್ತು ಕಾಯುವ ಪರಿಸ್ಥಿತಿ ಮಣಿಪುರದಲ್ಲಿ ಕಾಣಬಹುದಾಗಿದೆ. ಶಿಬಿರಗಳಲ್ಲಿ ಯಾವುದೇ ದಾಖಲೆಗಳಿಲ್ಲದೆ ತಮ್ಮ ಅಸ್ತಿತ್ವಕ್ಕಾಗಿ ಪರದಾಡುವವರ ಪರಿಸ್ಥಿತಿಯನ್ನೂ ಹೇಳತೀರದು.

ಬಾಬಾ ಸಾಹೇಬ್ ಅಂಬೇಡ್ಕರ್ ರ ತತ್ವಶಾಸ್ತ್ರ ಮತ್ತು ಅಂಬೇಡ್ಕರ ದೃಷ್ಟಿಯಲ್ಲಿ ಮಾನವ ಹಕ್ಕುಗಳ ಕುರಿತಂತೆ ಮಾತನಾಡಿದ ರಾಜಕೀಯ ಶಾಸ್ತ್ರ ತಜ್ಞ ಪ್ರೊ.ವಲೇರಿಯನ್ ರೊಡ್ರಿಗಸ್, 1930-40ರ ಅವಧಿಯಲ್ಲಿ ವಿಶೇಷ ವ್ಯಕ್ತಿತ್ವದ ಡಾ.ಅಂಬೇಡ್ಕರ್‌ರಿಂದು ‘ಹಾಟ್ ಸ್ಟಾರ್’ ಆಗಿದ್ದಾರೆ. ಮಾನವ ಹಕ್ಕುಗಳಿಗೆ ಸಂಬಂಧಿಸಿ ಅವರು ಪ್ರಮುಖ ಶಕ್ತಿ ಎನ್ನುವುದು ನನ್ನ ಅಭಿಪ್ರಾಯ ಎಂದರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆಯಿಂದ ಮಾತ್ರವೇ ಮಾನವ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯ ಎಂಬುದು ಡಾ.ಅಂಬೇಡ್ಕರವರ ನಿಲುವು ಆಗಿತ್ತು.

ಈ ಹಿನ್ನೆಲೆಯಲ್ಲಿಯೇ ಅಂಬೇಡ್ಕರ್ ಮಾನವರೆಲ್ಲರೂ ಯಾವುದೇ ಧರ್ಮ, ಜಾತಿ, ಲಿಂಗದ ತಾರತಮ್ಯ ಇಲ್ಲದೆ ಸಮಾನತೆ ಹೊಂದುವಲ್ಲಿ ಮೀಸಲಾತಿಯನ್ನು ಪ್ರತಿಪಾದಿಸಿದ್ದರು. ಆದರೆ ಇಂದಿಗೂ ಆ ಸಮಾನತೆಯನ್ನು ದೇಶದಲ್ಲಿ ಕಾಣಲು ಸಾಧ್ಯವಾಗಿಲ್ಲ. ಅದರಿಂದಾಗಿಯೇ ಮಾನವ ಹಕ್ಕುಗಳು ನಿರಂತರವಾಗಿ ಉಲ್ಲಂಘನೆಯಾಗುತ್ತಲೇ ಸಾಗುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಯ ಜತೆಗೆ ಪ್ರಸಕ್ತ ಸನ್ನಿವೇಶಗಳಲ್ಲಿ ಪರಿಸರದ ಅಸಮತೋಲವೂ ಇಂದಿನ ದಿನಗಳಲ್ಲಿ ಪ್ರಮುಖ ಚರ್ಚಿತ ವಿಷಯವಾಗಿದೆ. ಸಂವಿಧಾನದ ಮೂಲಭೂತ ಹಕ್ಕುಗಳು ಇಂದು ಮಾನವ ಹಕ್ಕುಗಳಿಗೆ ದಾರಿಯಾಗಿದೆ. ಹವಾಮಾನ ವೈಪರೀತ್ಯದ ಕುರಿತಂತೆ ಪರಿಸರಾಕ್ತರಿಂದ ಆತಂಕದ ಜತೆಗೆ ವನ್ಯಜೀವಿಗಳ ಹಕ್ಕುಗಳ ಬಗ್ಗೆಯೂ ಚರ್ಚೆಯಾಗುತ್ತಿದೆ ಎಂದು ಹೇಳಿದ ಅವರು, ಮಂಗಳೂರಿನಲ್ಲೂ ಮಿತಿಮೀರಿದ ವಾಹನಗಳಿಂದಾಗಿ ಪಾದಚಾರಿ ಉಪಯೋಗಿತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸ್ಥಳೀಯಾಡಳಿತ ಗಮನ ಹರಿಸುವ ಅಗತ್ಯವಿದೆ ಎಂದೂ ಅವರು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಯುಸಿಎಲ್ ರಾಜ್ಯ ಅಧ್ಯಕ್ಷರಾದ ಅರವಿಂದ ನರೈನ್, ಸಮಾಜದಲ್ಲಿ ಎಲ್ಲದ ಮಾನವ ಹಕ್ಕುಗಳು ಮುಖ್ಯ ಎಂಬ ದೃಷ್ಟಿಕೋನದೊಂದಿಗೆ 1975ರಲ್ಲಿ ಸ್ಥಾಪಿಸಲ್ಪಟ್ಟ ಪಿಯುಸಿಎಲ್ ಮಲ ಹೊರುವ ಪದ್ದತಿ ಬಗ್ಗೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ಸಂದರ್ಭ ನಡೆದ ಪಬ್ ದಾಳಿ, ಹಿಜಾಬ್ ಪ್ರಕರಣದ ಕುರಿತಂತೆ ಸತ್ಯಶೋಧನೆಯನ್ನು ನಡೆಸಿದೆ ಎಂದರು. ರೋಶನಿ ನಿಲಯದ ಸಿ.ಪ್ರೊ. ಎಲ್ಸಿನ್ ,ಸಂವಾದ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೊನೆಯಲ್ಲಿ ಸಭಿಕರ ಪ್ರಶ್ನೆಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು. ಸಂಘಟನೆಯ ಪ್ರಮುಖರು ವಿಷಯ ಪ್ರಸ್ತಾಪಿಸಿ, ಸ್ವಾಗತಿಸಿದರು.