June 21, 2025

Vokkuta News

kannada news portal

ದಕ ಜಿಲ್ಲೆ ನಿರಂತರ ಮತೀಯ ವಿಧ್ವೇಷ,ವ್ಯಕ್ತಿಹತ್ಯೆ, ಗುಂಪು ಹತ್ಯೆ ಸಾಮುದಾಯಿಕ ನಿರ್ಲಕ್ಷ್ಯ,ಜನ ಪ್ರತಿನಿಧಿ – ಕಾರ್ಯಕರ್ತ ರಿಂದ ಪಕ್ಷಕ್ಕೆ ರಾಜಿನಾಮೆ.

ಜಿಲ್ಲೆಯಲ್ಲಿ ಅಮಾಯಕ ಮುಸ್ಲಿಂ ಯುವಕರ ಹತ್ಯೆ, ಮತ್ತಿತರ ಅಹಿತಕರ ಘಟನೆ ನಡೆಯುತ್ತಿದ್ದರೂ ಸರಕಾರ ಇದನ್ನೆಲ್ಲಾ ನಿಭಾಯಿಸಲು ವಿಫಲವಾಗಿದೆ ಎಂದು ಆರೋಪಿಸಿ, ಸಾಮೂಹಿಕ ರಾಜೀನಾಮೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ, ಗುಂಪು  ಹತ್ಯೆ ಅಮಾಯಕ ಮುಸ್ಲಿಮರ ಕೊಲೆಗಳು ಮತ್ತು ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಇಂದು ಸಭೆ ಸೇರಿ ಸಾಮೂಹಿಕ ರಾಜೀನಾಮೆಯ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ.

ಇಂದು ಮಧ್ಯಾಹ್ನ ನಗರದ ಬೋಳಾರದಲ್ಲಿರುವ ಶಾದಿಮಹಲ್ ಸಭಾಂಗಣದಲ್ಲಿ ಮುಖಂಡರ ಮತ್ತು ಕಾರ್ಯಕರ್ತರ ಸಭೆ ಕರೆದು, ಈ ತೀರ್ಮಾನವನ್ನು ಪ್ರಕಟಿಸಿದ್ದಾರೆ.

ಜಿಲ್ಲೆಯಲ್ಲಿ ಅಮಾಯಕ ಮುಸ್ಲಿಂ ಯುವಕರ ಹತ್ಯೆ, ಮತ್ತಿತರ ಅಹಿತಕರ ಘಟನೆ ನಡೆಯುತ್ತಿದ್ದರೂ ಸರಕಾರ ಇದನ್ನೆಲ್ಲಾ ನಿಭಾಯಿಸಲು ವಿಫಲವಾಗಿದೆ ಎಂದು ಆರೋಪಿಸಿ, ಸಾಮೂಹಿಕ ರಾಜೀನಾಮೆ ಸಲ್ಲಿಸುವ ಸಲುವಾಗಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶಾದಿ ಮಹಲ್‌ನಲ್ಲಿ ಸಭೆ ಸೇರಿದ್ದರು.

ಸಭೆಯಲ್ಲಿ ಮೊದಲು ಭಾಷಣ ಮಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಮುಖ್ಯಮಂತ್ರಿ ಕರೆ ಮಾಡಿ ಮಾತನಾಡಿ ಒಂದು ವಾರದಲ್ಲಿ ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಭರವಸೆ ಈಡೇರದಿದ್ದರೆ ರಾಜೀನಾಮೆ ಬಗ್ಗೆ ಚಿಂತಿಸುವ ಮತ್ತು ಪುನರ್ ಪರಿಶೀಲನೆ ನಡೆಸುವ ಎಂದಾಗ ಸಭೆಯಲ್ಲಿ ಕೋಲಾಹಲ ಮತ್ತು ವಿರೋಧ ಉಂಟಾಯಿತು. ಈ ಬಗ್ಗೆ ಆಕ್ರೋಶಗೊಂಡ ಕಾರ್ಯಕರ್ತರು ಕೂಡಲೇ ರಾಜೀನಾಮೆ ನೀಡಲು ಪಟ್ಟು ಹಿಡಿದರು‌.

ಅಂತಿಮವಾಗಿ ಸಭೆಯಲ್ಲಿ ಹಾಜರಿದ್ದ ಎಲ್ಲ ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು. ರಾಜಿನಾಮೆ ನೀಡಿದ ಪ್ರಮುಖರಲ್ಲಿ ಎಂ.ಎಸ್.ಮೊಹಮ್ಮದ್, ಶಾಹುಲ್ ಹಮೀದ್, ಕೆ.ಅಶ್ರಫ್, ಅಬ್ದುಲ್ ರವೂಫ್ ಮುಂತಾದ ನಾಯಕರು ಇದ್ದರು.

ಇತ್ತೀಚೆಗೆ ಬಂಟ್ವಾಳ ಹೊರ ವಲಯದ ಕೊಳ್ತ ಮಜಲು ಎಂಬಲ್ಲಿನ ಅಬ್ದುಲ್ ರಹಿಮಾನ್ ರಹೀಮ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಬಗ್ಗೆ ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣದಲ್ಲಿ ಮತ್ತು ಬಹಿರಂಗ ಸಭೆಗಳಲ್ಲಿ ಕೆಲವು ಸಂಘಟನೆಯ ನಾಯಕರು ಈ ಹಿಂದೆ ನಡೆದ ಹತ್ಯೆ ಒಂದಕ್ಕೆ ಪ್ರತಿಯಾಗಿ ಪ್ರತೀಕಾರದ ಹತ್ಯೆಯನ್ನು ಮಾಡಲಿದ್ದೇವೆ ಎಂದು ಕೂಡ ಘೋಷಿಸಿದ್ದು, ಈ ಬಗ್ಗೆ ಸರಕಾರ, ಪೊಲೀಸು ಇಲಾಖೆ ಮತ್ತು ಜಿಲ್ಲಾಡಳಿತದ ಗಮನ ಸೆಳೆಯಲಾಗಿದ್ದರು ಕೂಡ ಸರಕಾರ ಮುಂಜಾಗ್ರತಾ ಕ್ರಮಗಳನ್ನು ಮಾಡಲು ವಿಫಲವಾಗಿತ್ತು ಎಂದು ಆರೋಪಿಸಲಾಗಿದೆ.

ನಿನ್ನೆ ಜಿಲ್ಲೆಯ ಪ್ರಮುಖ ಸಂಘಟನೆಯ ಮುಖ್ಯಸ್ಥರಾದ ಮತ್ತು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ಕೆ.ಅಶ್ರಫ್ ಅವರು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ ಬಗ್ಗೆ  ಮಾದ್ಯಮದ ಮುಂದೆ ಹೇಳಿಕೆ ನೀಡಿದ್ದರು. ಜಿಲ್ಲೆಯ ಹಲವು ಮುಖಂಡರು ರಾಜಿನಾಮೆ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು.