November 7, 2024

Vokkuta News

kannada news portal

ನಾಡ ಹಬ್ಬ ದಸರಾವನ್ನು ಸಂಘ ಪರಿವಾರ ಮತೀಯತೆಗಾಗಿ ಬಳಸುತ್ತಿದೆ: ದ.ಕ.ಎಸ್ಡಿಪಿಐ

ಹಲವಾರು ವರ್ಷಗಳ ಇತಿಹಾಸ ಇರುವ ನಾಡ ಹಬ್ಬವಾಗಿರುವ ದಸರಾ ಹಬ್ಬವನ್ನು ಸಂಘಪರಿವಾರವೂ ದ್ವೇಷ ಹಬ್ಬಿಸುವ ಹಬ್ಬವಾಗಿ ಮಾರ್ಪಡಿಸುತ್ತಿದೆ.

ಮಂಗಳೂರು: ತಲಾತಲಾಂತರದಿಂದ ನಡೆದುಕೊಂಡು ಬರುತ್ತಿರುವ ಐತಿಹಾಸಿಕ ದಸರಾ ಹಬ್ಬವನ್ನು ಸಂಘಪರಿವಾರವು ದುರುಪಯೋಗ ಪಡಿಸಿಕೊಂಡು ತಮ್ಮ ಕೋಮು ರಾಜಕೀಯಕ್ಕೆ ಬಳಸಿಕೊಂಡಿದೆ ಎಂದು ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಆರೋಪಿಸಿದ್ದಾರೆ.

ಹಲವಾರು ವರ್ಷಗಳ ಇತಿಹಾಸ ಇರುವ ನಾಡ ಹಬ್ಬವಾಗಿರುವ ದಸರಾ ಹಬ್ಬವನ್ನು ಸಂಘಪರಿವಾರವೂ ದ್ವೇಷ ಹಬ್ಬಿಸುವ ಹಬ್ಬವಾಗಿ ಮಾರ್ಪಡಿಸುತ್ತಿದೆ. ಗೂಂಡಾ ರಾಜ್ಯ ಎಂಬ ಕುಖ್ಯಾತಿ ಹೊಂದಿದ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಸಂವಿಧಾನ ಬಾಹಿರ ಬುಲ್ಡೋಝರ್ ದಾಳಿಯ ಟ್ಯಾಬ್ಲೋವನ್ನು ಪ್ರದರ್ಶಿಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಕೋಮು ದ್ವೇಷದ ಮೂಲಕ ಮರೆಮಾಚಲು ಪ್ರಯತ್ನಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಯುಪಿಯಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿರುವ ಬುಲ್ಡೋಝರ್ ದಾಳಿಯು ಅಸಾಂವಿಧಾನಿಕವಾಗಿದೆ. ಬಡ ವ್ಯಕ್ತಿಗಳನ್ನು ಹಾಗೂ ಸರ್ಕಾರದ ನಡೆಯನ್ನು ವಿರೋಧಿಸುವವರ ಮನೆಗಳ ಮೇಲೆ ಮಾತ್ರ ಬುಲ್ಡೋಝರ್ ದಾಳಿಯಾಗುತ್ತಿದೆಯೇ ಹೊರತು ಶ್ರೀಮಂತ ರು, ಕಾರ್ಪೊರೇಟ್ ಕುಳಗಳ ಮತ್ತು ರಾಜಕಾರಣಿಗಳ ಅಕ್ರಮ ಕಟ್ಟಡಗಳ ಮೇಲೆ ದಾಳಿಯಾಗುತ್ತಿಲ್ಲ. ಆರೋಪಿಯ ಆರೋಪ ಸಾಬೀತಾಗುವುದು ನ್ಯಾಯಾಲಯದಲ್ಲಾಗಿರುತ್ತದೆ, ತಪ್ಪಿತಸ್ಥನಾಗಿದ್ದರೆ ನ್ಯಾಯಾಲಯವೇ ಕಾನೂನು ರೀತಿಯ ಶಿಕ್ಷೆ ವಿಧಿಸುತ್ತದೆ ಹಾಗಾಗಿ ಈ ರೀತಿಯ ದಾಳಿ ಅಸಾಂವಿಧಾನಿಕವಾಗಿದೆ. ಆದರೆ ಸಂಘಪರಿವಾರವು ಇದನ್ನು ಪ್ರತಿಬಿಂಬಿಸುವ ಟ್ಯಾಬ್ಲೋ ಪ್ರದರ್ಶಿಸುವ ಮೂಲಕ ದಸರಾ ಹಬ್ಬದ ಮೌಲ್ಯವನ್ನು ಹಾಗೂ ಗೌರವವನ್ನು ಇಲ್ಲದಾಗಿಸುತ್ತಿದೆ. ಇದನ್ನು ನಾಗರಿಕ ಸಮಾಜ ಖಂಡಿಸಬೇಕಾಗಿದೆ ಹಾಗೂ ಸಂಘಪರಿವಾರದ ದ್ವೇಷ ರಾಜಕೀಯವನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಅಬೂಬಕ್ಕರ್ ಕುಳಾಯಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.